ಶ್ರೀನಗರದಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಕಡಿದಾದ ನೀರ್ಗಲ್ಲ ಅಪಾಯಕಾರಿ ಪ್ರದೇಶದಲ್ಲಿ ಚಳಿಗಾಲದ ಯುದ್ಧಾಭ್ಯಾಸ ತರಬೇತಿ ಸಂದರ್ಭದಲ್ಲಿ ಉಂಟಾದ ಭಾರೀ ಹಿಮಪಾತದಿಂದಾಗಿ 15 ಸೈನಿಕರು ಮೃತರಾಗಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಪೂರ್ಣ ಮಂಜಿನಿಂದ ಆವೃತ್ತವಾಗಿದ್ದ ಮತ್ತು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಹ ಕಡಿದಾದ ಮಂಜಿನ ಗೋಡೆಗಳತ್ತ 60 ಸೇನಾ ತುಕುಡಿಗಳು ಸಾಗುತ್ತಿದ್ದಾಗ ಮಂಜುಗಡ್ಡೆಯ ಪ್ರವಾಹ ಕೆಳಗೆ ಒಮ್ಮಿಂದೊಮ್ಮೆಗೆ ಹರಿದು ಬಂತು ಎಂದು ಸೇನಾ ಮೂಲಗಳು ತಿಳಿಸಿವೆ.
ಟನ್ನುಗಟ್ಟಲೆ ಮಂಜಿನಡಿಯಲ್ಲಿ 15 ಸೈನಿಕರು ಹೂತು ಹೋಗಿದ್ದಾರೆ. 17 ಮಂದಿಯನ್ನು ಈ ಸಂದರ್ಭದಲ್ಲಿ ರಕ್ಷಿಸಲಾಗಿದ್ದು, ಅವರನ್ನು ಶ್ರೀನಗರದ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಯೋಧರು ಇನ್ನೂ ಪತ್ತೆಯಾಗಿಲ್ಲ. ಇತರ 26 ಮಂದಿಯನ್ನು ಕೂಡ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಗಿಸಲಾಗಿದೆ ಎಂದು ಭೂಸೇನೆಯ ವಕ್ತಾರ ಕರ್ನಲ್ ಜೆ.ಎಸ್. ಬ್ರಾರ್ ಮತ್ತು ಪೊಲೀಸರು ತಿಳಿಸಿದ್ದಾರೆ.
ಗುಲ್ಮಾರ್ಗ್ ಮೂಲದ ತರಬೇತಿ ಕೇಂದ್ರದಿಂದ ನಡೆಸಲ್ಪಡುವ ಚಳಿಗಾಲದ ಆಧುನಿಕ ಯುದ್ಧಾಭ್ಯಾಸ ತರಬೇತಿ ಶಿಬಿರಕ್ಕೆ 60 ಗುಂಪುಗಳಲ್ಲಿ 350 ಸೈನಿಕರನ್ನು ಆರಿಸಲಾಗಿತ್ತು.
350 ಯೋಧರನ್ನೊಳಗೊಂಡ ತಂಡವು ಬೆಳಿಗ್ಗೆ 8 ಗಂಟೆಗೆ ಗುಲ್ಮಾರ್ಗ್‌ನಿಂದ ಎಂಟು ಕಿಲೋ ಮೀಟರ್ ದೂರದಲ್ಲಿರುವ 10,000 ಅಡಿ ಎತ್ತರದ ಪ್ರದೇಶ ಖಿಲನ್ಮಾರ್ಗ್ ತಲುಪಿ ಚಳಿಗಾಲದ ಯುದ್ಧಾಭ್ಯಾಸ ತರಬೇತಿ ಶಿಬಿರವನ್ನು ನಡೆಸಲು ಉದ್ದೇಶಿಸಿತ್ತು. ಈ ಹೊತ್ತಿನಲ್ಲಿ ಶಿಖರದಲ್ಲಿ ಮಂಜು ಕುಸಿತವಾಗಿದೆ ಎಂದು ಕರ್ನಲ್ ವಿವರಣೆ ನೀಡಿದ್ದಾರೆ.
ಸ್ಥಳಕ್ಕೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಚಿವ ನಾಸಿರ್ ಅಸ್ಲಾಮ್ ವಾಣಿ ಭೇಟಿ ನೀಡಿದ್ದು, ಹಿಮಪಾತದಲ್ಲಿ ಪ್ರವಾಸಿಗರು ಸಿಕ್ಕಿ ಹಾಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.