ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಗ್ಧ ಮುಖದ ಮಹಿಳಾ ಭಯೋತ್ಪಾದಕಿ ಕೊನೆಗೂ ಸಿಕ್ಕಿ ಬಿದ್ದಳು
(woman terrorist | Jammu and Kashmir | HuJI | Hafiza Bano)
ಜಮ್ಮು ಕಾಶ್ಮೀರದಲ್ಲಿ ಹುಜಿ ಉಗ್ರ ಸಂಘಟನೆಗೆ ಸೇರಿದ ಮಹಿಳಾ ಭಯೋತ್ಪಾದಕಿಯೊಬ್ಬಳನ್ನು ಭಾರತೀಯ ಭದ್ರತಾ ಪಡೆಗಳು ಬಂಧಿಸಿದ್ದು, ಮಹಿಳೆಯರನ್ನೂ ವಿಧ್ವಂಸಕ ಕೃತ್ಯಗಳಿಗೆ ವ್ಯಾಪಕವಾಗಿ ಬಳಸುವ ತಂತ್ರವನ್ನು ತೀವ್ರವಾದಿಗಳು ಹೊಂದಿದ್ದಾರೆ ಎಂಬುದು ಖಚಿತವಾಗಿದೆ.
ಭಯೋತ್ಪಾದಕ ಸಂಘಟನೆಗಳು ಮಹಿಳೆಯರನ್ನು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಹೊಸತಲ್ಲವಾದರೂ ಭಾರತದಲ್ಲಿ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಪತ್ತೆಯಾಗಿಲ್ಲ. ಈಕೆ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಭಯೋತ್ಪಾದಕ ಸಂಘಟನೆಯ ಸದಸ್ಯೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳಿವೆ.
PR
ಬುರ್ಖಾ ಧರಿಸಿಕೊಂಡಿದ್ದ ಈಕೆ ನೋಡಲು ತೀರಾ ಅಮಾಯಕಳಂತೆ ವರ್ತಿಸುತ್ತಿದ್ದರೂ ಕೂಡ ಭಯಾನಕ ಯೋಜನೆಯೊಂದನ್ನು ರೂಪಿಸುತ್ತಿದ್ದಳು. 27ರ ಹರೆಯದ ಈಕೆಯನ್ನು ಹಫೀಜಾ ಭಾನು ಎಂದು ಗುರುತಿಸಲಾಗಿದೆ. ಜಮ್ಮುವಿನ ಬಳಿ ಈಕೆಯನ್ನು ಭಾರತೀಯ ಭದ್ರತಾ ಪಡೆಗಳು ಸೆರೆ ಹಿಡಿದಿದಿವೆ.
ತೀರಾ ಮುಗ್ಧಳಂತೆ ಮಕ್ಕಳನ್ನು ಜತೆಗೇ ಕರೆದುಕೊಂಡು ಸುತ್ತಾಡುತ್ತಿದ್ದ ಭಾನು ತನ್ನ ಚಟುವಟಿಕೆಗಳನ್ನು ಯಾರಿಗೂ ತಿಳಿಯದಂತೆ ಮುಗಿಸುತ್ತಾ ಜಮ್ಮು-ಕಾಶ್ಮೀರ ಪೊಲೀಸರಿಗೆ ಇದುವರೆಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಳು.
ಈ ಪ್ರದೇಶದಲ್ಲಿನ ಭದ್ರತಾ ಪಡೆಗಳ ಕಾರ್ಯಚಟುವಟಿಕೆಗಳ ಮಾಹಿತಿಗಳನ್ನು ನಿರಂತರವಾಗಿ ಆಕೆ ಹುಜಿ ಸಂಘಟನೆಗೆ ತಿಳಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ಹೇಳಿವೆ.
ಸೆರೆ ಸಿಕ್ಕಿದ್ದು ಹೇಗೆ? ಖಚಿತ ಮಾಹಿತಿಯನ್ನು ಆಧರಿಸಿದ ಭದ್ರತಾ ಪಡೆಗಳು ಕಿಶ್ತಾವರ್ ಜಿಲ್ಲೆಯ ಚಿಚಾ-ನಾಗ್ಸೈನಿ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದ ತಾಣಕ್ಕೆ ದಾಳಿ ನಡೆಸಿದ್ದರು.
ಈ ಸಂದರ್ಭದಲ್ಲಿ ಹುಜಿ ವಿಭಾಗೀಯ ಕಮಾಂಡರ್ ದಾವೂದ್, ನಜೀರ್ ಅಹ್ಮದ್ ಆಲಿಯಾಸ್ ಪರ್ಖಾನ್ ಮತ್ತು ಮುಹಮ್ಮದ್ ಇಸಾಕ್ ಎಂಬ ಮೂವರು ಉಗ್ರರನ್ನು ಈ ಸಂದರ್ಭದಲ್ಲಿ ಹತ್ಯೆ ಮಾಡಲಾಗಿತ್ತು. ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ದಾವೂದ್ ಪತ್ನಿ ಭಾನು ಎಂದು ಪೊಲೀಸರು ತಿಳಿಸಿದ್ದಾರೆ. ಎಕೆ ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಡಗುದಾಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಕಳೆದ ವರ್ಷ ಜಮ್ಮುವಿನಲ್ಲಿ ನಿಯಂತ್ರಣ ರೇಖೆ ದಾಟುತ್ತಿದ್ದಾಗ ಆಸಿಯಾ ಮಲಿಕ್ ಎಂಬ ಐಎಸ್ಐ ಮಹಿಳಾ ಏಜೆಂಟೊಬ್ಬಳನ್ನು ಗಡಿ ಭದ್ರತಾ ಪಡೆ ಬಂಧಿಸಿತ್ತು. ಆ ಬಳಿಕ ಪತ್ತೆಯಾಗಿರುವ ಏಕೈಕ ಮಹಿಳಾ ಭಯೋತ್ಪಾದಕಿ ಭಾನು. ಈಕೆಯನ್ನು ಕೂಲಂಕಷ ವಿಚಾರಣೆಗೊಳಪಡಿಸಿದ ನಂತರ ಮತ್ತಷ್ಟು ಮಹಿಳಾ ಉಗ್ರರು ಕಾಶ್ಮೀರಕ್ಕೆ ನುಸುಳಿರುವ ಕುರಿತು ಮಾಹಿತಿಗಳು ದೊರಕಬಹುದು ಎಂದು ನಿರೀಕ್ಷಿಸಲಾಗುತ್ತಿದೆ.