ಮುಂಬೈ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವರಲ್ಲಿ ಜೀವಂತ ಸೆರೆ ಸಿಕ್ಕಿರುವ ಏಕೈಕ ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಸಾಕಲು ಪ್ರತೀ ದಿನ 8.5 ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿರುವುದು ಗೊತ್ತೇ ಇದೆ. ಇದೀಗ ಆತನನ್ನು ಇಡಲಾಗಿರುವ ಜೈಲನ್ನು ಸುರಕ್ಷಿತ ತಾಣವಾಗಿಸುವ ಉದ್ದೇಶದಿಂದ ಸರಕಾರ 44 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದೆ.
ಕಸಬ್‌ನನ್ನು ಇಡಲಾಗಿರುವ ಆರ್ಥರ್ ರೋಡ್ ಜೈಲಿಗೆ ಬಂದೋಬಸ್ತ್ ಹೆಚ್ಚಿಸುವ ನಿಟ್ಟಿನಲ್ಲಿ ಮೋನೋರೈಲು ಹಾದಿಯನ್ನು ಬದಲಾಯಿಸುವ ನಿರ್ಧಾರಕ್ಕೆ ಮುಂಬೈ ಬಂದಿದೆ. ಇದು ಬಂಧನದಲ್ಲಿರುವ ಉಗ್ರನ ವಿಚಾರಣೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಭದ್ರತಾ ಕ್ರಮ ಎಂದು ಮೂಲಗಳು ಹೇಳಿವೆ.
PTI
ಜೈಲಿನ ಪಕ್ಕದಲ್ಲೇ ಹಾದು ಹೋಗಬೇಕಿದ್ದ ಮೋನೋ ರೈಲು ಮಾರ್ಗವನ್ನು ಬದಲಾಯಿಸುತ್ತಿರುವ ಕಾರಣ ಹೆಚ್ಚುವರಿ ವೆಚ್ಚವಾಗಲಿದೆ. ಸಾಮಾನ್ಯವಾಗಿ ಒಂದು ಕಿಲೋ ಮೀಟರ್ ಮೋನೋ ರೈಲು ಹಳಿಗೆ 123 ಕೋಟಿ ರೂಪಾಯಿ ಖರ್ಚಾಗುತ್ತದೆ. ಇಲ್ಲಿ 720 ಮೀಟರ್ ಹಳಿಯನ್ನು ನಿರ್ಮಿಸಬೇಕಾಗುತ್ತದೆ. ಅದಕ್ಕಾಗಿ ತಗಲುವ ವೆಚ್ಚ 88 ಕೋಟಿ. ಆರ್ಥರ್ ರೋಡ್ ಜೈಲಿನಿಂದಾಗಿ 39 ಕೋಟಿ ರೂಪಾಯಿಗಳಿಂದ 44 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹಣ ವ್ಯಯಿಸಬೇಕಾಗುತ್ತದೆ ಎಂದು ಇಂಜಿನಿಯರ್ ತನ್ನ ವರದಿಯಲ್ಲಿ ತಿಳಿಸಿದ್ದಾರೆ.
ಈ ರೈಲ್ವೇ ಹಳಿ ಗಣಾಚಾರ್ಯ ವೃತ್ತದಿಂದ ಸಾಣೆ ಗುರೂಜಿ ರಸ್ತೆಯ ಮೂಲಕ ಆರ್ಥರ್ ರೋಡ್ ಪೊಲೀಸ್ ಚೌಕಿಯವರೆಗೆ ನಿರ್ಮಾಣವಾಗಲಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.
ರೈಲು ಹಳಿಯಲ್ಲದೆ ಆರು ಲೇನ್‌ಗಳ ರಸ್ತೆಯ ಯೋಜನೆಯನ್ನೂ ಬದಲಾಯಿಸಬೇಕಾಗುತ್ತದೆ. ರೈಲು ಮತ್ತು ರಸ್ತೆಗಳಲ್ಲಿ ಪ್ರಯಾಣಿಸುವ ವಾಹನಗಳಿಂದ ಅತಿ ಭದ್ರತೆ ಒದಗಿಸಲಾಗಿರುವ ಜೈಲನ್ನು ನೋಡಲು ಸಾಧ್ಯವಾಗಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಪಾಲಿಗೆ ತೀರಾ ಅಪಾಯಕಾರಿಯಾಗಿರುವ ಕಸಬ್‌ನನ್ನು ಮುಗಿಸಲು ಭಯೋತ್ಪಾದಕರು ಭಾರೀ ಯತ್ನ ನಡೆಸುತ್ತಿರುವ ಕಾರಣ ಆತನನ್ನು ರಕ್ಷಿಸುವುದು ಭಾರತಕ್ಕೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಜೈಲಿನ ಪಕ್ಕದಿಂದ ಸಾಗುವ ರೈಲಿನ ಹಾದಿಯನ್ನು ಬದಲಾಯಿಸುವ ಮೂಲಕ ಯಾರೊಬ್ಬರಿಗೂ ಜೈಲಿನ ಮೇಲ್ನೋಟ ಲಭ್ಯವಾಗದಂತೆ ಅಥವಾ ದುಷ್ಕೃತ್ಯ ನಡೆಸಲು ಸಾಧ್ಯವಾಗದಿರುವಂತೆ ಯೋಜನೆಗಳನ್ನು ಬದಲಾಯಿಸಲಾಗಿದೆ.
ಸಾಮಾನ್ಯವಾಗಿ ಮೋನೋ ರೈಲು ಹಳಿ ನೆಲದಿಂದ ಎಂಟು ಮೀಟರ್ ಎತ್ತರದಲ್ಲಿರುತ್ತದೆ. ಆದರೆ ಈಗ ಬದಲಾಯಿಸಲಿರುವ ಹಳಿಯನ್ನು 6.75 ಮೀಟರುಗಳಿಗೆ ಸೀಮಿತಗೊಳಿಸಲಾಗುತ್ತದೆ. ಇದು ಕೂಡ ಸಂಭಾವ್ಯ ಅಪಾಯವನ್ನು ತಪ್ಪಿಸಲು ಎಂದು ಅಧಿಕಾರಿಗಳು ವಿವರಿಸುತ್ತಾರೆ.
2008ರ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಲ್ಲಿ ಕಸಬ್ ಮಾತ್ರ ಬದುಕುಳಿದು ಪೊಲೀಸರ ಕೈಗೆ ಸಿಕ್ಕಿದ್ದ. ಆತನ ರಕ್ಷಣೆಗಾಗಿ ಕಳೆದ ಒಂದು ವರ್ಷದಲ್ಲಿ 35 ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.