'ಮೈ ನೇಮ್ ಈಸ್ ಖಾನ್' ಬಿಡುಗಡೆಗೆ ಶಿವಸೇನೆ ಅಡ್ಡಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಸಿನಿಮಾದ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಮತ್ತು ನಾಯಕ ನಟ ಶಾರೂಖ್ ಖಾನ್ ಪೊಲೀಸ್ ಇಲಾಖೆ ಮೊರೆ ಹೋಗಿದ್ದಾರೆ.
ಫೆಬ್ರವರಿ 12ರಂದು ಬಿಡುಗಡೆಯಾಗಲಿರುವ ಚಿತ್ರಕ್ಕೆ ಅಡ್ಡಿಪಡಿಸುವುದಾಗಿ ಶಿವಸೇನೆ ಹೇಳಿರುವುದರಿಂದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲಕರ ಪ್ರತಿನಿಧಿಗಳೊಂದಿಗೆ ಮುಂಬೈ ಪೊಲೀಸ್ ಆಯುಕ್ತ ಡಿ. ಶಿವಾನಂದನ್ ಅವರನ್ನು ಕರಣ್ ಮತ್ತು ಶಾರೂಖ್ ಭೇಟಿ ಮಾಡಿದ್ದಾರೆ.
ಮಲ್ಟಿಪ್ಲೆಕ್ಸ್‌ಗಳು ಚಿತ್ರವನ್ನು ಬಿಡುಗಡೆ ಮಾಡಬಾರದು, ಮಾಡಿದಲ್ಲಿ ಅದರ ಪರಿಣಾಮವನ್ನು ಎದುರಿಸಲು ಸಿದ್ಧರಿರಬೇಕು ಎಂದು ಶಿವಸೇನೆ ಬೆದರಿಕೆ ಹಾಕಿರುವುದರಿಂದ ಚಿತ್ರಮಂದಿರಗಳು ಇನ್ನೂ ಸಿನಿಮಾದ ಭಿತ್ತಿಪತ್ರಗಳನ್ನು ಹಾಕಿಲ್ಲ.
ಇತ್ತೀಚೆಗಷ್ಟೇ ಚಿತ್ರ ಬಿಡುಗಡೆಗೆ ತಾನು ಅಡ್ಡಿಪಡಿಸುವುದಿಲ್ಲ ಎಂದು ಬಾಳಾ ಠಾಕ್ರೆ ಹೇಳಿದ್ದರಾದರೂ, ಈ ನಿರ್ಧಾರವನ್ನು ಇದ್ದಕ್ಕಿದ್ದಂತೆ ಅವರು ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ನಂತರ ಯಾವುದೇ ಸ್ಪಷ್ಟನೆ ಶಿವಸೇನೆಯಿಂದ ಬಂದಿಲ್ಲ.
ಐಪಿಎಲ್ ಕುರಿತು ಶಾರೂಖ್ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಪರ ಮಾತನಾಡಿದ್ದಕ್ಕೆ ತೀವ್ರವಾಗಿ ಟೀಕಿಸಿದ್ದ ಶಿವಸೇನೆ, ದೇಶದ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಇಲ್ಲದೆ ಇದ್ದರೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿತ್ತು.
ಶಾರೂಖ್ ಪಾಕಿಸ್ತಾನಿ ಆಟಗಾರರನ್ನು ಬೆಂಬಲಿಸುವ ಮೂಲಕ ದೇಶದ್ರೋಹ ಮಾಡಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ್ದ ಬಾಲಿವುಡ್ ಬಾದ್‌ಶಾಹ್, ತಾನು ಭಾರತೀಯನೊಬ್ಬ ಮಾತನಾಡಬಹುದಾದ ಭಾಷೆಯನ್ನಷ್ಟೇ ಬಳಸಿದ್ದೇನೆ; ನಾನೇನೂ ತಪ್ಪು ಮಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದರು.
ಚಿತ್ರ ಬಿಡುಗಡೆಯಾಗುತ್ತದೆ: ಕರಣ್ ಪೊಲೀಸ್ ಆಯುಕ್ತರ ಜತೆ ಮಾತುಕತೆ ನಡೆಸಿದ ನಂತರ ಪ್ರತಿಕ್ರಿಯಿಸಿರುವ ಕರಣ್, 'ಮೈ ನೇಮ್ ಈಸ್ ಖಾನ್' ಸಿನಿಮಾ ಬಿಡುಗಡೆಯಾಗುವ ಎಲ್ಲಾ ಚಿತ್ರ ಮಂದಿರಗಳಿಗೂ ಗರಿಷ್ಠ ಭದ್ರತೆ ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದರು.
ಎಲ್ಲವೂ ನಿಗದಿಯಂತೆ ನಡೆಯಲಿದ್ದು, ಫೆಬ್ರವರಿ 12ಕ್ಕೆ ಚಿತ್ರ ಬಿಡುಗಡೆಯಾಗುತ್ತದೆ. ಮುಂಗಡ ಬುಕ್ಕಿಂಗ್ ನಿನ್ನೆಯೇ ಆರಂಭವಾಗಿದೆ. ಆಯುಕ್ತರ ಭೇಟಿ ನಮಗೆ ತೃಪ್ತಿ ತಂದಿದೆ. ಎಲ್ಲವೂ ಸರಾಗವಾಗಿ ನಡೆಯಲಿದೆ ಎಂದು ವಿವರಣೆ ನೀಡಿದ್ದಾರೆ.