ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಲೆ ಆರೋಪಿಗಳು ಜೈಲಿನಲ್ಲಿ ಸಮವಸ್ತ್ರ ತೊಡೋದು ಕಡ್ಡಾಯ
(Undertrials on murder | Mumbai | prison uniform | Bombay High Court)
ಕೊಲೆ ಆರೋಪವನ್ನು ಎದುರಿಸುತ್ತಿರುವ ವಿಚಾರಣಾಧೀನ ಖೈದಿಗಳು ಇನ್ನು ಜೈಲಿನ ಸಮವಸ್ತ್ರ ತೊಟ್ಟುಕೊಳ್ಳುವುದು ಕಡ್ಡಾಯ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಖೈದಿಯೊಬ್ಬನಿಗೆ ಬಾಂಬೆ ಹೈಕೋರ್ಟ್ ನೀಡಿದ ನಿರ್ದೇಶನವಿದು.
ವಿಚಾರಣಾಧೀನ ಖೈದಿಗಳಿಗೆ ಕಡ್ಡಾಯವಲ್ಲದಿದ್ದರೂ ನನಗೆ ಜೈಲಿನ ಸಮವಸ್ತ್ರವನ್ನು ಬಲವಂತವಾಗಿ ತೊಡಿಸಲಾಗುತ್ತಿದೆ ಎಂದು ಥಾಣೆ ಸೆಂಟ್ರಲ್ ಜೈಲಿನ ದಿನೇಶ್ ಶಿವದಾಸನ್ ಎಂಬಾತ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ.
ಆದರೆ ಜೈಲು ಕೈಪಿಡಿ ಸೆಕ್ಷನ್ 4ಐ ಪ್ರಕಾರ ಹತ್ಯೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳು ಜೈಲು ಸಮವಸ್ತ್ರ ಧರಿಸಬೇಕಾಗುತ್ತದೆ. ಇತರ ವಿಚಾರಣಾಧೀನ ಕೈದಿಗಳಿಗೆ ಇದರಿಂದ ವಿನಾಯಿತಿಯಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಸರಕಾರಿ ವಕೀಲ ವಿಠಲ್ ಕೊಂಡೆ ದೇಶ್‌ಮುಖ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಆದ್ದರಿಂದ ನಿಯಮಾವಳಿಗಳ ಪ್ರಕಾರ ಅರ್ಜಿದಾರನು ಜೈಲಿನ ಬಟ್ಟೆಯನ್ನು ತೊಡುವುದು ಕಡ್ಡಾಯ ಎಂದು ನ್ಯಾಯಮೂರ್ತಿಗಳಾದ ರಂಜನ್ ದೇಸಾಯಿ ಮತ್ತು ಮೃದುಲಾ ಭಕ್ತರ್‌ರನ್ನೊಳಗೊಂಡ ವಿಭಾಗೀಯ ಪೀಠವು ತೀರ್ಪು ನೀಡಿತು.
ಕುತೂಹಲಕಾರಿ ವಿಚಾರವೆಂದರೆ ಈ ಹಿಂದೆ ನ್ಯಾಯಮೂರ್ತಿ ಬಿಲಾಲ್ ನಜ್ಕಿ ಮತ್ತು ಎ.ಆರ್. ಜೋಷಿಯವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣಾಧೀನ ಕೈದಿಗಳು ಸಮವಸ್ತ್ರ ತೊಡಬೇಕಾಗಿಲ್ಲ ಎಂದು ತೀರ್ಪು ನೀಡಿರುವುದು.
ಅರ್ಜಿದಾರ ದಿನೇಶ್ ಇದನ್ನು ಪಾಲಿಸುವುದಾಗಿ ಹೇಳಿದ್ದಾನೆ. ಹೈಕೋರ್ಟ್ ಇದೀಗ ಹಿಂದಿನ ನಿಯಮಗಳಿಗೆ ಮಾರ್ಪಾಡು ಮಾಡಲು ನ್ಯಾಯಮೂರ್ತಿ ಜೋಷಿಯವರನ್ನೊಳಗೊಂಡ ನೂತನ ಪೀಠವೊಂದನ್ನು ಸ್ಥಾಪಿಸಲಿದೆ ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ.