ಹಿಂಸಾಚಾರ ನಿಲ್ಲಿಸಿದರೆ ಮಾತುಕತೆಗೆ ಸಿದ್ಧ: ನಕ್ಸಲರಿಗೆ ಕೇಂದ್ರ
ಕೊಲ್ಕತ್ತಾ, ಮಂಗಳವಾರ, 9 ಫೆಬ್ರವರಿ 2010( 16:42 IST )
ನಕ್ಸಲರು ಹಿಂಸಾಚಾರವನ್ನು ನಿಲ್ಲಿಸುವ ಭರವಸೆ ಮೂಡಿಸಿದಲ್ಲಿ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಸರಕಾರ ಹೇಳಿದೆ.
ನೀವು ಹಿಂಸಾಚಾರವನ್ನು ನಿಲ್ಲಿಸಿದಲ್ಲಿ, ನೀವು ಹಿಂಸಾಚಾರವನ್ನು ಸ್ಥಗಿತಗೊಳಿಸಲು ಕರೆ ನೀಡಿದಲ್ಲಿ ನಾವು ಅದಕ್ಕಿಂತ ಹೆಚ್ಚು ಬೇರೇನನ್ನೂ ಕೇಳಲಾರೆವು; ಯಾವುದೇ ವಿಚಾರದ ಕುರಿತು ನಿಮ್ಮೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಾಗುತ್ತೇವೆ ಎಂದು ನಕ್ಸಲ್ ಸಮಸ್ಯೆ ಪರಿಹಾರ ಕುರಿತು ನಡೆದ ಪಶ್ಚಿಮ ಬಂಗಾಲ, ಒರಿಸ್ಸಾ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಕೇಂದ್ರ ಗೃಹಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.
ನಿಷೇಧಿತ ಬಂಡುಕೋರರತ್ತ ಸ್ನೇಹಹಸ್ತ ಚಾಚುವ ಜತೆಜತೆಗೇ ಎಚ್ಚರಿಕೆಯನ್ನೂ ನೀಡಿದ್ದಾರೆ. ನೀವು ಹಿಂಸಾಚಾರವನ್ನು ತ್ಯಜಿಸುವವರೆಗೆ ಕೇಂದ್ರವು ಮಿಲಿಟರಿಯನ್ನು ನಿಮ್ಮ ವಿರುದ್ಧ ಬಳಸುವುದನ್ನು ಮುಂದುವರಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ದುರದೃಷ್ಟಕರವಾಗಿ ನಮ್ಮ ಈ ಹಿಂದಿನ ಮನವಿಯನ್ನು ಮಾವೋವಾದಿಗಳು ತಳ್ಳಿ ಹಾಕಿದ್ದರು. ಹಾಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿನ ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಂದುವರಿಯುತ್ತದೆ. ತೀವ್ರವಾದಿಗಳ ವಿರುದ್ಧ ನಾವು ಎಚ್ಚರಿಕೆಯ, ನೈತಿಕತೆಯ ಮತ್ತು ನಿಯಂತ್ರಿತ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ ಎಂದರು.
ಮತ್ತೆ ವಿವರಣೆ ನೀಡಿದ ಚಿದಂಬರಂ, ದೇಶದ ನಾಲ್ಕು ಅತೀ ಹೆಚ್ಚು ನಕ್ಸಲ್ ಬಾಧಿತ ರಾಜ್ಯಗಳಲ್ಲಿ ಅವರ ವಶದಲ್ಲಿರುವ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಳ್ಳಲು ಕೇಂದ್ರೀಯ ಪಡೆಗಳು ಯತ್ನಿಸಲಿವೆ; ನಾಗರಿಕ ಆಡಳಿತವನ್ನು ದೃಢಪಡಿಸುವುದು ಕೂಡ ನಮಗೆ ಮಹತ್ವದ ವಿಚಾರ. ಕಾರ್ಯಾಚರಣೆಗಳಿಂದ ಒಟ್ಟಾರೆ ಹಾನಿ ಮತ್ತು ಮುಗ್ದ ಜನರಿಗೆ ತೊಂದರೆಯಾಗಬಾರದೆಂಬುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.
ನಕ್ಸಲರೊಂದಿಗೆ ರಾಜಕೀಯ ಪಕ್ಷಗಳು ಸೇರಿಕೊಂಡಿವೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಪ್ರಸಕ್ತ ನನಗೆ ಗೊತ್ತಿದ್ದ ಪ್ರಕಾರ ಯಾರೂ ಅವರೊಂದಿಗಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ನಕ್ಸಲರ ಜತೆ ಯಾರೂ ಸೇರಿಕೊಳ್ಳಲಾರರು ಎಂದರು.