ದೇಶದಾದ್ಯಂತ ರೈತರು, ವಿಜ್ಞಾನಿಗಳು, ಗ್ರಾಹಕರ ವೇದಿಕೆಗಳು ಮತ್ತು ಸರಕಾರೇತರ ಸಂಸ್ಥೆಗಳಿಂದ ಕುಲಾಂತರಿ ಬದನೆಯ ವಾಣಿಜ್ಯ ಬೆಳೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾದ ಕೇಂದ್ರ ಸರಕಾರ "ಸದ್ಯ"ಕ್ಕೆ ಪ್ರಸ್ತಾಪವನ್ನು ಕೈ ಬಿಟ್ಟಿದೆ.
ಬಿಟಿ ಬದನೆಗೆ ದೇಶದಲ್ಲಿ ಅವಕಾಶ ನೀಡಬೇಕೆಂದು ಅಮೆರಿಕಾ ಒತ್ತಡ ಹೇರಿತ್ತು ಎಂಬ ಆಪಾದನೆಗಳ ನಡುವೆಯೂ ಕುಲಾಂತರಿ ಬದನೆ ತಳಿ ಬಿಡುಗಡೆ ಸದ್ಯಕ್ಕೆ ಮಾಡುವುದಿಲ್ಲ ಎಂದು ಕೇಂದ್ರ ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಇಂದು ಸಂಜೆ ಪ್ರಕಟಿಸಿದ್ದಾರೆ.
ಆದರೂ ಕುಲಾಂತರಿ ತಳಿಯತ್ತ ಸಂಪೂರ್ಣ ಮುಖ ತಿರುಗಿಸಿಲ್ಲ ಎಂಬುದನ್ನು ತನ್ನ ಮಾತಿನಲ್ಲೇ ಸ್ಪಷ್ಟಪಡಿಸುತ್ತಾ ಹೋದ ಸಚಿವರು, ಕೇವಲ ಈ ತಳಿಗೆ ಮಾತ್ರ ಸರಕಾರ ಅವಕಾಶ ನೀಡುತ್ತಿಲ್ಲ; ಕುಲಾಂತರಿ ಬದನೆಯಲ್ಲಿ ಬೇರೆ ಬೇರೆ ತಳಿಗಳಿವೆ. ಈ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದ್ದು, ಮುಂದಿನ ದಿನಗಳಲ್ಲಿ ಸರಕಾರ ಇದರತ್ತ ಗಮನ ಹರಿಸಲಿದೆ ಎಂದರು.
ಅಲ್ಲದೆ ಸರಕಾರ ಈಗ ವಾಣಿಜ್ಯ ಬೆಳೆ ಅವಕಾಶ ನಿರಾಕರಿಸಿರುವುದು ಕೇವಲ ಬಿಟಿ ಬದನೆಯ ಈ ತಳಿಗೆ ಮಾತ್ರ, ಬಿಟಿ ಟೊಮ್ಯಾಟೋ ಅಥವಾ ಬಿಟಿ ಅಕ್ಕಿ ಅಥವಾ ಬಿಟಿ ಅಲೂಗಡ್ಡೆಗಲ್ಲ ಎಂದು ಸಚಿವರು ಮತ್ತಷ್ಟು ಕುಲಾಂತರಿಗಳ ಆಗಮನವಾಗಲಿದೆ ಎಂಬ ಸಂಕೇತಗಳನ್ನು ನೀಡಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಸಚಿವರು ಹಲವು ರಾಜ್ಯಗಳಲ್ಲಿ ರೈತರು, ವಿಜ್ಞಾನಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳು ಸೇರಿದಂತೆ ಸಾರ್ವಜನಿಕರ ಜತೆ ಮುಕ್ತ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿರೋಧವೇ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲೂ ಸಚಿವರು ರೈತರಿಂದ ಭಾರೀ ವಿರೋಧವನ್ನು ಎದುರಿಸಬೇಕಾಗಿತ್ತು.
ಈಗಾಗಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರ ಆಕ್ರೋಶಕ್ಕೊಳಗಾಗಿರುವ ಕೇಂದ್ರ ಸರಕಾರವು ಕುಲಾಂತರಿ ತಳಿಗೆ ಅವಕಾಶ ನೀಡಿದಲ್ಲಿ ಸರಕಾರ ವಿರೋಧಿ ಅಲೆಯೇಳಬಹುದು ಎಂಬ ಭೀತಿಯಿಂದ ಅಮೆರಿಕಾ ಒತ್ತಡದ ಹೊರತಾಗಿಯೂ ರೈತಪರ ನಿರ್ಧಾರಕ್ಕೆ ಬಂದಿದೆ ಎಂದು ವಿಶ್ಲೇಷಣೆ ನಡೆಸಲಾಗುತ್ತಿದೆ.
ಕಳೆದ ವರ್ಷ ಕುಲಾಂತರಿ ಅನುಮೋದನಾ ಸಮಿತಿಯು (ಜಿಇಎಸಿ) ಕುಲಾಂತರಿ ಬದನೆಯ ವಾಣಿಜ್ಯ ಬೆಳೆಗೆ ಅನುಮತಿ ನೀಡಿತ್ತು. ಆಗಲೇ ಇದಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಜಿಇಎಸಿಯ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲರೂ ಕುಲಾಂತರಿ ಬದನೆಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬೆಳೆಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದರು. ಪಿ.ಎಂ. ಭಾರ್ಗವ ಮತ್ತು ರಮೇಶ್ ಸೋನಿ ಎಂಬಿಬ್ಬರು ಸದಸ್ಯರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಕ್ರಿಮಿ, ಕೀಟಗಳು ಬೆಳೆಗಳ ಬಳಿ ಸುಳಿಯದಂತೆ ಅವುಗಳ ಹಾವಳಿಯನ್ನು ತಡೆಗಟ್ಟಲು ಕೃತಕವಾಗಿ ಜೀನ್‌ಗಳನ್ನು ಬದಲಾಯಿಸಿ ಜೈವಿಕ ಕ್ರಿಯೆ ಮೂಲಕ ಬಿಟಿ ಬದನೆ ಕುಲಾಂತರಿ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರಿಂದಾಗಿ ರೈತರಿಗೆ ಸಹಕಾರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರೂ, ಇದಕ್ಕೆ ದೇಶದಾದ್ಯಂತ ಹಲವು ತಜ್ಞರು ಕೂಡ ವಿರೋಧ ವ್ಯಕ್ತಪಡಿಸಿದ್ದರು.
ಪರಿಸರ ಸಂಘಟನೆಗಳು ಮತ್ತು ಕೆಲವು ವಿಜ್ಞಾನಿಗಳ ಪ್ರಕಾರ ಕುಲಾಂತರಿ ತಳಿಯಿಂದ ಅಪಾಯವೇ ಹೆಚ್ಚು. ಈ ಕೃಷಿ ಮಾಡಿದಲ್ಲಿ ಅಲ್ಲಿ ಕೆಲಸ ಮಾಡುವವರಿಗೆ ಮತ್ತು ಅದನ್ನು ಸೇವಿಸುವವರಿಗೆ ಕ್ಯಾನ್ಸರ್ ಮುಂತಾದ ಮಾರಕ ರೋಗಗಳು ಬರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದರು. ಇದು ಪರಿಸರದ ನಿಯಮಗಳಿಗೆ ವಿರುದ್ಧವಾಗಿದೆ ಎನ್ನುವುದು ಅವರ ವಾದ.