ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾರೂಖ್-ಸೇನೆ ವಿವಾದ; ನಮಗೆ ಭದ್ರತೆ ಬೇಡ, ಕಸಬ್‌ಗೆ ನೀಡಿ..! (SRK-Sena row | Mumbai | Uddhav Thackeray | Ashok Chavan)
Bookmark and Share Feedback Print
 
ಶಾರೂಖ್ ಖಾನ್ - ಶಿವಸೇನೆ ವಿವಾದ ತಾರಕಕ್ಕೇರುತ್ತಿದೆ. 'ಮೈ ನೇಮ್ ಈಸ್ ಖಾನ್' ಸಿನಿಮಾ ಬಿಡುಗಡೆ ಮಾಡುವ ಚಿತ್ರಮಂದಿರಗಳ ಮೇಲೆ ದಾಳಿ ಮುಂದುವರಿಯುತ್ತಿದ್ದಂತೆಯೇ ಸರಕಾರಿ ಭದ್ರತೆಯನ್ನು ವಾಪಸ್ ಮಾಡಿರುವ ಶಿವಸೇನೆ ನಾಯಕರು, ನಿಮಗೆ ಆಪ್ತನಾದ ಉಗ್ರ ಕಸಬ್‌ಗೆ ಭದ್ರತೆ ನೀಡಲು ಅವರನ್ನು ನೇಮಿಸಿ ಎಂದು ಕಿಡಿ ಕಾರಿದೆ.

ಕೆಲವು ಶಾಸಕರಿಗೆ ನೀಡಲಾಗಿದ್ದ ಅಂಗರಕ್ಷಕರನ್ನು ವಾಪಸ್ ಪಡೆದ ಬೆನ್ನಲ್ಲೇ ಎಚ್ಚರಿಕೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್, ಹಿಂಸಾಚಾರ ಮುಂದುವರಿಸಿದರೆ ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಭದ್ರತೆಯನ್ನು ಹಿಂದಕ್ಕೆ ಪಡೆಯಲು ತಾನು ಹಿಂದೆಮುಂದೆ ನೋಡುವುದಿಲ್ಲ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಉದ್ಧವ್, ತನಗೆ ಸರಕಾರದ ಭದ್ರತೆ ಬೇಡ. ನನಗೆ ಅದರ ಅಗತ್ಯವಿಲ್ಲ. ನಮ್ಮ ಪಕ್ಷದ ಶಾಸಕರು ಕೂಡ ಅವರಿಗೆ ನೀಡಲಾಗಿರುವ ಸರಕಾರಿ ಭದ್ರತೆಯನ್ನು ಮರಳಿಸಲಿದ್ದಾರೆ. ರಾಷ್ಟ್ರ ಪ್ರೇಮವನ್ನು ತೋರಿಸುವವರಿಗಿಂತ ಸರಕಾರಕ್ಕೆ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಆಪ್ತವಾಗಿರುವುದರಿಂದ ಅವನಿಗೆ ಭದ್ರತೆ ನೀಡಲು ನಮ್ಮ ಸಿಬ್ಬಂದಿಗಳನ್ನು ನೇಮಿಸಿ ಎಂದಿದ್ದಾರೆ.

ಆದರೆ ಭದ್ರತೆ ಹಿಂದಕ್ಕೆ ಪಡೆಯಬೇಕೆಂದು ಠಾಕ್ರೆ ಮಂಗಳವಾರ ತಡರಾತ್ರಿಯವರೆಗೆ ಮನವಿ ಸಲ್ಲಿಸಿಲ್ಲ ಎಂದು ರಾಜ್ಯ ಗೃಹಸಚಿವ ಆರ್.ಆರ್. ಪಾಟೀಲ್ ತಿಳಿಸಿದ್ದಾರೆ.

ಹಲವು ಚಿತ್ರಮಂದಿರಗಳಿಗೆ ದಾಳಿ...
ಶಾರೂಖ್ ಚಿತ್ರಕ್ಕೆ ಅಡ್ಡಿ ಮಾಡುವುದಿಲ್ಲ ಎಂದು ಶಿವಸೇನೆ ವರಿಷ್ಠ ಬಾಳಾ ಠಾಕ್ರೆ ಹೇಳಿದ್ದ ಹೊರತಾಗಿಯೂ ಶಿವಸೈನಿಕರು ಹಲವು ಚಿತ್ರಮಂದಿರಗಳಿಗೆ ದಾಳಿ ಮಾಡಿರುವ ಕುರಿತು ವರದಿಗಳು ಬಂದಿವೆ.

ದಕ್ಷಿಣ ಮುಂಬೈಯ 'ಮೆಟ್ರೋ' ಥಿಯೇಟರುಗಳು ಮತ್ತು ಕಂಜುರ್ಮಾರ್ಗ್‌ನಲ್ಲಿ 'ಹೂಮಾ ಸಿನಿಮಾ' ಮಂದಿರಗಳಲ್ಲಿ ಮುಂಗಡ ಟಿಕೆಟ್ ನೀಡಲಾಗುತ್ತಿತ್ತು. ಇಲ್ಲಿಗೆ ಶಿವಸೈನಿಕರು ಟಿಕೆಟ್ ಖರೀದಿಸುವವರ ಸೋಗಿನಲ್ಲಿ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಸುಮಾರು 350ರಷ್ಟು ಮಂದಿಯಿದ್ದ ಗುಂಪು ಸಿನಿಮಾ ಪರದೆಗಳಿಗೂ ಹಾನಿ ಮಾಡಿದ್ದಾರೆ. ಅಲ್ಲಿದ್ದ ಭಿತ್ತಿಪತ್ರಗಳು, ಪೀಠೋಪಕರಣಗಳಿಗೂ ಹಾನಿ ಮಾಡಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಇಲಾಖೆ ಮೂಲಗಳು ಹೇಳಿವೆ.

ಘಾಟ್ಕೊಪ್ಪರ್‌ನಲ್ಲಿನ ಆರ್-ಸಿಟಿ ಮಾಲ್ ಮತ್ತು ಪಂತನಗರ್‌ನಲ್ಲಿ ಫೇಮ್ ಸಿನಿಮಾ ಮಂದಿರಗಳ ಹೊರಗೆ ಪೋಸ್ಟರ್‌ಗಳನ್ನು ಕಿತ್ತು ಹಾಕಿ ಥಿಯೇಟರ್ ಸುತ್ತುವರಿದಿದ್ದ ಸುಮಾರು 380 ಮಂದಿ ಶಿವಸೇನೆ ಕಾರ್ಯಕರ್ತರನ್ನು ಮುನ್ನೆಚ್ಚೆರಿಕೆ ಕ್ರಮವಾಗಿ ಬಂಧಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಿತೇಶ್ ಕುಮಾರ್ ತಿಳಿಸಿದ್ದಾರೆ.

ಮೈ ನೇಮ್ ಈಸ್ ಖಾನ್ ಚಿತ್ರ ಬಿಡುಗಡೆಗೆ ನಾವು ಅವಕಾಶ ನೀಡುವುದಿಲ್ಲ. ಶಾರೂಖ್ ಮೊದಲು ಬಾಳಾಸಾಹೇಬ್ ಠಾಕ್ರೆಯವರಲ್ಲಿ ಕ್ಷಮೆ ಯಾಚಿಸಬೇಕು. ನಂತರವಷ್ಟೇ ನಾವು ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ ಎಂದು ಸೇನೆ ನಾಯಕ ಮನೋಹರ್ ಜೋಷಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ