ಪಶ್ಚಿಮ ಬಂಗಾಲ ಸರಕಾರವು ಮುಸ್ಲಿಮರಿಗೆ ಸರಕಾರಿ ಉದ್ಯೋಗದಲ್ಲಿ ಶೇ.10ರ ಮೀಸಲಾತಿ ಪ್ರಕಟಿಸಿರುವುದನ್ನು ಟೀಕಿಸಿರುವ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ, ಮುಸ್ಲಿಮರು ಬಡವರಾಗಿರುವ ಕಾರಣಕ್ಕೆ ಜಿಹಾದ್‌ನತ್ತ ಒಲವು ತೋರಿಸುತ್ತಾರೆ ಎಂಬ ಸಮರ್ಥನೆಯನ್ನು 'ಮೂರ್ಖತನದ ಪರಮಾವಧಿ' ಎಂದು ಜರೆದಿದ್ದಾರೆ. ಅಲ್ಲದೆ ಹಿಂದೂಗಳನ್ನು ದರೋಡೆ ಮಾಡಿ ಮುಸ್ಲಿಮರನ್ನು ಸರಕಾರಗಳು ಓಲೈಸುತ್ತಿವೆ ಎಂದು ಅವರು ಕಿಡಿ ಕಾರಿದ್ದಾರೆ.
ಇತರೆ ಹಿಂದುಳಿದ ವರ್ಗಗಳಡಿಯಲ್ಲಿ (ಒಬಿಸಿ) ಮುಸ್ಲಿಂ ಸಮುದಾಯಕ್ಕೆ ಕಮ್ಯೂನಿಸ್ಟ್ ಸರಕಾರ ಪ್ರಕಟಿಸಿರುವ ಮೀಸಲಾತಿಯಿಂದಾಗಿ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಇದು ಸಂಪೂರ್ಣವಾಗಿ ಅಸಾಂವಿಧಾನಿಕ ಪ್ರಕ್ರಿಯೆ ಎಂದು ಹೇಳಿದ್ದಾರೆ.
PTI
ಮುಸ್ಲಿಮರು ಬಡವರಾಗಿದ್ದಾರೆ, ಹಾಗಾಗಿ ಅವರು ಜಿಹಾದ್‌ನತ್ತ ಹೊರಳುತ್ತಾರೆ ಎಂದು ವಾದಿಸುವವರು ಮೂರ್ಖರ ಸ್ವರ್ಗದಲ್ಲಿದ್ದಾರೆ. ಅತ್ಯುತ್ತಮ ಕುಟುಂಬಗಳ ಹಿನ್ನೆಲೆಯಿಂದ ಬಂದ ಇಂಜಿನಿಯರುಗಳು, ಪೈಲಟ್‌ಗಳು ಮತ್ತು ಇತರ ವೃತ್ತಿಪರರು ಕೂಡ ಜಿಹಾದ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತೊಗಾಡಿಯಾ ತನ್ನ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.
ಮುಸ್ಲಿಮರಿಗೆ ಶೇ.4ರ ಮೀಸಲಾತಿ ನೀಡಬೇಕೆನ್ನುವ ಆಂಧ್ರಪ್ರದೇಶ ಸರಕಾರದ ಆದೇಶವನ್ನು ಅಲ್ಲಿನ ಹೈಕೋರ್ಟ್ ರದ್ದುಪಡಿಸಿದ ಹೊರತಾಗಿಯೂ ಪಶ್ಚಿಮ ಬಂಗಾಲ ಸರಕಾರ ಇಂತಹ ಮೀಸಲಾತಿಯನ್ನು ಜಾರಿಗೆ ತಂದಿದೆ. ಇದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಲ ಸರಕಾರಗಳು ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಕಟಿಸುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶವನ್ನಿಟ್ಟುಕೊಂಡಿವೆ. ಈ ಸರಕಾರಗಳು ಮುಸ್ಲಿಮರ ಓಟ್ ಬ್ಯಾಂಕ್‌ನತ್ತ ಕಣ್ಣು ಹಾಕಿವೆ. ಇದರ ವಿರುದ್ಧ ಹಿಂದೂಗಳು ಎದ್ದೇಳಬೇಕು ಎಂದು ತೊಗಾಡಿಯಾ ಕರೆ ನೀಡಿದರು.
ಹಿಂದೂಗಳ ದರೋಡೆಯಿದು... ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗ ಮತ್ತು ಇತರ ಕಾರ್ಯನಿರತ ಅಥವಾ ಉದ್ಯಮ ವರ್ಗದ ಹಿಂದೂಗಳಲ್ಲಿ ಬಹುತೇಕರು ಕಠಿಣ ಶ್ರಮವಹಿಸಿ ತೆರಿಗೆ ಪಾವತಿಸುತ್ತಾರೆ. ಇದರ ಪ್ರಯೋಜನವನ್ನು ಬಡ ಹಿಂದೂಗಳು, ಹಿಂದೂಗಳಲ್ಲಿನ ಹಿಂದುಳಿದ ಸಮುದಾಯಗಳು, ಹಿಂದೂ ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗಗಳಿಗೆ ನೀಡುವುದನ್ನು ಬಿಟ್ಟು, ಜನನ ನಿಯಂತ್ರಣವೇ ಹೊಂದಿಲ್ಲದವರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ. ಇದು ಹಿಂದೂಗಳಿಗೆ ಮಾಡಲಾಗುತ್ತಿರುವ ಅನ್ಯಾಯ ಮಾತ್ರವಲ್ಲ, ಹಿಂದೂಗಳ ದರೋಡೆಯೂ ಹೌದು ಎಂದು ತೊಗಾಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಜಮ್ಮು-ಕಾಶ್ಮೀರಕ್ಕೆ ಬರುವ ಯುವ ಜನತೆಗೆ ವಿಶೇಷ ವ್ಯವಸ್ಥೆಗಳನ್ನು ಪೂರೈಸುವುದಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈಗ ಪ್ರಕಟಿಸಿದೆ. ಭಾರತದಲ್ಲಿ ಶೇ.78ರಷ್ಟು ಹಿಂದೂ ಯುವಕ-ಯುವತಿಯರಿಗೆ ಕೆಲಸವಿಲ್ಲ, ಶೇ.79ರಷ್ಟು ಹಿಂದೂ ರೈತರು ಈಗಾಗಲೇ ತಮ್ಮ ಜಮೀನು ಅಥವಾ ಬೆಳೆಗಳನ್ನು ಕಳೆದುಕೊಂಡಿದ್ದಾರೆ ಅಥವಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೇ.68ರಷ್ಟು ಹಿಂದೂ ಮಕ್ಕಳು ಪೌಷ್ಟಿಕಾಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇವರಿಗೆಲ್ಲ ಸಹಾಯ ಮಾಡುವ ಬದಲು ಸರಕಾರಗಳು ಮುಸ್ಲಿಮರನ್ನು ಓಲೈಸುತ್ತಿವೆ. ಇದನ್ನು ಕಣ್ಮುಚ್ಚಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.