ಬೆಲೆಯೇರಿಕೆ ಕಾವು ಕಡಿಮೆಯಾಗುತ್ತಿದ್ದಂತೆ ಕಾರ್ಯಕರ್ತರನ್ನು ಒಟ್ಟುಗೂಡಿಸುತ್ತಾ ಬಿಜೆಪಿ ನೂತನ ಅಧ್ಯಕ್ಷ ನಿತಿನ್ ಗಡ್ಕರಿ ರಾಜಧಾನಿಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಬೆಲೆಯೇರಿಕೆಗೆ ಶರದ್ ಪವಾರ್ ಒಬ್ಬರೇ ಕಾರಣರಲ್ಲ, ಕಾಂಗ್ರೆಸ್ ನೇತೃತ್ವದ ಇಡೀ ಯುಪಿಎ ಸರಕಾರ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದು ಅವರು ಚಾಟಿಯೇಟು ಬೀಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಗಡ್ಕರಿಯವರು ಬುಧವಾರ ಪ್ರತಿಭಟನೆ ಆರಂಭಿಸಿದ್ದು, ಯುಪಿಎ ಸರಕಾರದ ಕುರುಡು ಆರ್ಥಿಕ ನೀತಿಗಳೇ ಬೆಲೆಯೇರಿಕೆಗೆ ಕಾರಣ; ಇಲ್ಲಿ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರೊಬ್ಬರನ್ನೇ ದೂರಿ ಪ್ರಯೋಜನವಿಲ್ಲ. ಮನಮೋಹನ್ ಸಿಂಗ್ ಸಂಪುಟವನ್ನೇ ತರಾಟೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಪಕ್ಷದ ಕಾರ್ಯಕರ್ತರು ಸಂಸತ್ ಭವನದತ್ತ ತೆರಳಿದ್ದು, ಅವರ ಜತೆ ಬಿಜೆಪಿ ಹಿರಿಯ ಮುಖಂಡರು ಸೇರಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗಡ್ಕರಿಯವರು ಮೊತ್ತ ಮೊದಲ ಬಾರಿಗೆ ಇಂತಹ ರ‌್ಯಾಲಿಯನ್ನು ನಡೆಸುತ್ತಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ.
ಕೇಂದ್ರ ಸರಕಾರವು ಪೆಟ್ರೋಲ್ ಬೆಲೆಯೇರಿಕೆಗೆ ಚಿಂತನೆ ನಡೆಸುತ್ತಿರುವಂತೆ ಇತ್ತ ಬಿಜೆಪಿ ರಾಷ್ಟ್ರದಾದ್ಯಂತ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗಡ್ಕರಿ ಪ್ರಕಟಿಸಿದ್ದಾರೆ.
ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕಾಂಗ್ರೆಸ್ ಮತ್ತು ಯುಪಿಎ ಸರಕಾರದ ತಪ್ಪು ಆರ್ಥಿಕ ನಡೆಗಳೇ ಕಾರಣ. ಇಡೀ ಯುಪಿಎ ಸರಕಾರವೇ ಇದರ ಹೊಣೆ ಹೊರಬೇಕೇ ಹೊರತು ಕೇವಲ ಪವಾರ್ ಮಾತ್ರವಲ್ಲ. ಪ್ರಧಾನ ಮಂತ್ರಿ, ಸಚಿವರುಗಳು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೀಗೆ ಎಲ್ಲರೂ ಕಾರಣರು ಎಂದು ಮಹಾರಾಷ್ಟ್ರದವರೇ ಆದ ಪವಾರ್ ಬಗ್ಗೆ ಗಡ್ಕರಿ ಮೃದು ಮಾತುಗಳನ್ನಾಡಿದ್ದಾರೆ.
ಕಾಂಗ್ರೆಸ್ ಘೋಷಣೆಯನ್ನೇ ವ್ಯಂಗ್ಯ ಮಾಡುತ್ತಾ ಗಡ್ಕರಿಯವರು, 'ಕಾಂಗ್ರೆಸ್‌ನ ಕೈ ಬಡವರೊಂದಿಗೆ ಇರದೇ ಇರುವುದು ನಿಜಕ್ಕೂ ದುರದೃಷ್ಟಕರ. ಅದೀಗ ಅವರ ಕತ್ತಿನ ಹತ್ತರ ಸರಿಯುತ್ತಿದೆ' ಎಂದರು.
ಇದೇ ಸಂದರ್ಭದಲ್ಲಿ ಅವರು ಬೆಲೆಯೇರಿಕೆಯನ್ನು ಕ್ರಿಕೆಟೀಕರಣಗೊಳಿಸಿದ್ದಾರೆ. ಸಕ್ಕರೆ ಬೆಲೆ ಅರ್ಧಶತಕ ಬಾರಿಸಿದೆ. ಅತ್ತ ಬೇಳೆಕಾಳು ಶತಕ ಹೊಡೆದಿದೆ. ಶೀಘ್ರದಲ್ಲೇ ಇವೆಲ್ಲ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಮಹೇಂದ್ರ ಸಿಂಗ್ ಧೋನಿಯವರನ್ನು ಹಿಂದಿಕ್ಕಲಿವೆ ಎಂದಿದ್ದಾರೆ.