ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದಕ ಸಂಬಂಧ; ದೆಹಲಿಯಲ್ಲಿ ಅಮೆರಿಕಾ ಪ್ರಜೆ ಸೆರೆ
(US national | IGI airport | America | Winston Marshal Carmichael)
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗುಗಳ ತಪಾಸಣೆ ನಡೆಸುವಾಗ ಆಕ್ಷೇಪಾರ್ಹ ದಾಖಲೆಗಳು ಮತ್ತು ಚೂರಿಯೊಂದು ಅಮೆರಿಕಾ ಪ್ರಜೆಯೊಬ್ಬನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಭಯೋತ್ಪದನಾ ಸಂಬಂಧ ಶಂಕೆಯಿಂದ ತನಿಖಾ ದಳಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿವೆ.
ಅಮೆರಿಕಾದ ವಿನ್ಸ್‌ಟನ್ ಮಾರ್ಷಲ್ ಕಾರ್ಮಿಕೆಲ್ ಎಂಬಾತನನ್ನು ಗುರುವಾರ ಮುಂಜಾನೆ ಅಧಿಕಾರಿಗಳು ನವದೆಹಲಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದು, ಆತನ ಹಿನ್ನೆಲೆಯನ್ನು ಗಮನಿಸಿದಾಗ ಮುಂಬೈ ಭಯೋತ್ಪಾದನಾ ದಾಳಿಯ ರೂವಾರಿ ಡೇವಿಡ್ ಹೆಡ್ಲಿಯೊಂದಿಗೆ ಹೋಲಿಕೆಯಿರುವುದು ಕಂಡು ಬಂದಿದೆ. ನ್ಯೂಯಾರ್ಕ್ ನಿವಾಸಿಯಾಗಿರುವ ಮಾರ್ಷಲ್ ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವನು. ತಾನು 40 ವರ್ಷಗಳ ಹಿಂದೆಯೇ ಮತಾಂತರಗೊಂಡಿದ್ದೆ ಎಂದು ವಿಚಾರಣೆ ಸಂದರ್ಭದಲ್ಲಿ ಆತ ತಿಳಿಸಿದ್ದಾನೆ.
ಕತಾರ್ ಏರ್‌ವೇಸ್ ವಿಮಾನದ ಮೂಲಕ ದೋಹಾಕ್ಕೆ ತೆರಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ 61ರ ಹರೆಯದ ಈ ಅಮೆರಿಕಾ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ.
ಸಿಐಎಸ್ಎಫ್ ಸಿಬ್ಬಂದಿಗಳು ಆತನನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ತನ್ನಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳಿಲ್ಲ ಎಂದು ಹೇಳಿದ್ದ. ಆದರೆ ಆಯುರ್ವೇದ ಔಷಧಿ 'ಶಿಲಾಜಿತ್'ನ ನಡುವೆ ಆತ ಚೂರಿಯೊಂದನ್ನು ಬಚ್ಚಿಟ್ಟುಕೊಂಡದ್ದು ಈ ಸಂದರ್ಭದಲ್ಲಿ ಪತ್ತೆಯಾಗಿತ್ತು.
ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಪ್ರವಾಸಿ ವೀಸಾ ಹೊಂದಿರುವ ಮಾರ್ಷಲ್ ದೆಹಲಿಗೆ ಪಾಕಿಸ್ತಾನದಿಂದ ಬಂದಿದ್ದ. ಭಾರತಕ್ಕೆ ಆತ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಭೇಟಿ ಸಂದರ್ಭದಲ್ಲೂ ಆತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಭೇಟಿ ನೀಡಿದ್ದ.
ಇದೀಗ ದೆಹಲಿ ಪೊಲೀಸ್ ಇಲಾಖೆ ಮತ್ತು ಗುಪ್ತಚರ ವಿಭಾಗಗಳು ಮಾರ್ಷಲ್‌ನನ್ನು ವಿಚಾರಣೆ ನಡೆಸುತ್ತಿವೆ. ಈತನ ಬಂಧನದ ಬಗ್ಗೆ ಅಮೆರಿಕಾ ದೂತವಾಸಕ್ಕೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.