ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಮೈ ನೇಮ್ ಈಸ್ ಕಸಬ್' ಮಾಡಿ; ದೇಶಭಕ್ತರನ್ನು ಪಾಕ್‌ಗೆ ಕೊಡಿ (Maharashtra | Shiv Sena | Shah Rukh Khan | Bal Thackeray)
'ಮೈ ನೇಮ್ ಈಸ್ ಕಸಬ್' ಮಾಡಿ; ದೇಶಭಕ್ತರನ್ನು ಪಾಕ್‌ಗೆ ಕೊಡಿ
ಮುಂಬೈ, ಗುರುವಾರ, 11 ಫೆಬ್ರವರಿ 2010( 12:35 IST )
ಶಾರೂಖ್ ಖಾನ್ ನಾಯಕನಾಗಿರುವ 'ಮೈ ನೇಮ್ ಈಸ್ ಖಾನ್' ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅವರನ್ನು ಗುರಿ ಮಾಡಿರುವ ಶಿವಸೇನೆ, ಕುರ್ಚಿ ಉಳಿಸಿಕೊಳ್ಳಲು ಅವರು ಕಸರತ್ತು ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.
ಶಿವಸೇನೆ ಮುಖವಾಣಿ 'ಸಾಮ್ನಾ'ದ ಸಂಪಾದಕೀಯಕ್ಕೆ 'ಮೈ ನೇಮ್ ಈಸ್ ಅಶೋಕ್ ಖಾನ್' ಎಂದು ಶೀರ್ಷಿಕೆ ಬರೆಯಲಾಗಿದ್ದು, ಅವರು ತನ್ನ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು 'ಪಾಕಿಸ್ತಾನಿ ಪ್ರೇಮಿ' ಶಾರೂಖ್ ಖಾನ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ಟೀಕಿಸಿದೆ.
'ಮೈ ನೇಮ್ ಈಸ್ ಕಸಬ್' ಎಂಬ ಚಿತ್ರವನ್ನು ನೀವು ನಿರ್ಮಿಸಿ ಮತ್ತು ಅದನ್ನು ವಿರೋಧಿಸುವ ರಾಷ್ಟ್ರೀಯತಾವಾದಿಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿ. ಅಶೋಕ್ ಚೌಹಾನ್‌ರವರೇ, ನೀವಿದನ್ನು ಮಾಡುತ್ತೀರಿ ಎಂಬ ನಂಬಿಕೆ ನಮಗಿದೆ ಎಂದು ಸಂಪಾದಕೀಯ ವ್ಯಂಗ್ಯವಾಡಿದೆ.
ಅಲ್ಲದೆ ಚೌಹಾನ್‌ಗೆ ಮುಖ್ಯಮಂತ್ರಿ ಪದವಿ ದಕ್ಕಿದ್ದು ಪಾಕಿಸ್ತಾನ ಮತ್ತು ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಕೃಪೆಯಿಂದಾಗಿ. ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುವಂತೆ ಕಸಬ್‌ನನ್ನು ಕಳುಹಿಸಿತ್ತು. ಹಾಗಾಗಿ ವಿಲಾಸ್‌ರಾವ್ ದೇಶ್‌ಮುಖ್ ಸ್ಥಾನ ಕಳೆದುಕೊಂಡರು. ಆ ಸ್ಥಾನ ಚೌಹಾನ್ ಅವರಿಗೆ ಸಿಕ್ಕಿತ್ತು. ಹಾಗಾಗಿ ಪಾಕಿಸ್ತಾನಕ್ಕೆ ಕೃತಜ್ಞತೆ ಸಲ್ಲಿಸುವುದು ತನ್ನ ಕರ್ತವ್ಯವೆಂದು ಭಾವಿಸಿರುವ ಚೌಹಾನ್, ಶಾರೂಖ್‌ಗೆ ತನ್ನಿಂದ ಸಾಧ್ಯವಾಗುವ ಎಲ್ಲಾ ಮಾರ್ಗಗಳನ್ನೂ ಬಳಸಿ ರಕ್ಷಣೆ ನೀಡುತ್ತಿದ್ದಾರೆ ಎಂದು ಕಟು ಶಬ್ದಗಳಲ್ಲಿ ಟೀಕಿಸಿದೆ.
ಶಾರೂಖ್‌ರನ್ನು ತಡೆದದ್ದು ಕಾಂಗ್ರೆಸ್... ಶಿವಸೈನಿಕರನ್ನು ಪೊಲೀಸರು ಬಗ್ಗು ಬಡಿಯುತ್ತಾರೆ, ಹಾಗಾಗಿ ನೀವು ಬಾಳಾ ಠಾಕ್ರೆಯವರನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಶಾರೂಖ್ ಅವರನ್ನು ತಡೆದಿತ್ತು ಎಂದೂ ಶಿವಸೇನೆ ಆರೋಪಿಸಿದೆ.
ನಾಳೆ ಬಿಡುಗಡೆಯಾಗಲಿರುವ 'ಮೈ ನೇಮ್ ಈಸ್ ಖಾನ್' ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಶಾರೂಖ್ ತನ್ನ ಅಮೆರಿಕಾ ಭೇಟಿ ಮುಗಿಸಿ ಬಂದ ಕೂಡಲೇ ಠಾಕ್ರೆಯವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲು ಬಯಸಿದ್ದರು. ಆದರೆ ಸರಕಾರವು ಶಿವಸೇನೆಯ ಕಾರ್ಯಕರ್ತರನ್ನು ತಡೆಯಲು ಸಮರ್ಥವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್-ಎನ್‌ಸಿಪಿಗಳು ಈ ಯತ್ನವನ್ನು ವಿಫಲಗೊಳಿಸಿದ್ದವು ಎಂದು 'ಸಾಮ್ನಾ'ದಲ್ಲಿ ಬರೆಯಲಾಗಿದೆ.
ಪ್ರಸಕ್ತ ಅಬುದಾಭಿಯಲ್ಲಿರುವ ಶಾರೂಖ್, ತನ್ನ ಚಿತ್ರವನ್ನು ಮಹಾರಾಷ್ಟ್ರದಲ್ಲಿ ಸುಗಮವಾಗಿ ಬಿಡುಗಡೆ ಮಾಡುವಂತಾಗಲು ತಾನು ಠಾಕ್ರೆಯವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
ಬುಕ್ಕಿಂಗ್ ಮತ್ತೆ ಶುರು... ಕಳೆದ ಕೆಲವು ದಿನಗಳಿಂದ ಶಿವಸೈನಿಕರು ಸಿನಿಮಾ ಮಂದಿರಗಳಿಗೆ ದಾಳಿ ನಡೆಸುತ್ತಿದ್ದುದರಿಂದ ಹಲವು ಥಿಯೇಟರುಗಳು ಮುಂಗಡ ಟಿಕೆಟ್ ವ್ಯವಸ್ಥೆ ರದ್ದುಗೊಳಿಸಿದ್ದವು. ಆದರೆ ಇದೀಗ ಮತ್ತೆ ಆರಂಭಿಸಿವೆ.
ಸುಮಾರು 1,600ಕ್ಕೂ ಹೆಚ್ಚು ಶಿವಸೈನಿಕರನ್ನು ಬಂಧಿಸಲಾಗಿದೆ. ಅವರ ಮೇಲೆ ಹಿಂಸಾಚಾರ ಮತ್ತು ಸಮಾಜ ವಿರೋಧಿ ಕೃತ್ಯಗಳನ್ನೆಸಗಿದ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ಹೇಳಿವೆ.