ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ದೇಶದೆಲ್ಲೆಡೆ ಸಂಚರಿಸುತ್ತಾ ಯುವಜನತೆಯಲ್ಲಿ ಸಂಚಲನ ಮೂಡಿಸುತ್ತಿರುವುದರಿಂದ ಆತಂಕಗೊಂಡಿರುವ ಬಿಜೆಪಿ ತನ್ನ ಅಸ್ತ್ರವಾಗಿ ವರುಣ್ ಗಾಂಧಿಯವರನ್ನು ಬಳಸಲು ಯೋಚನೆ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಕಾಲೇಜುಗಳಿಗೆ ಮತ್ತು ಯುವ ಜನತೆಯನ್ನು ಸತತ ಭೇಟಿ ಮಾಡುವ ಮೂಲಕ ರಾಜಕೀಯದ ಕಿಚ್ಚು ಹಚ್ಚಿಸುತ್ತಿರುವ ರಾಹುಲ್ ಅವರಿಗೆ ನೆಹರೂ ಕುಟುಂಬದ ಕುಡಿ ವರುಣ್ ಮೂಲಕ ಪ್ರತಿತಂತ್ರ ಹೆಣೆಯಬಹುದು ಎಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ ಪ್ರಸಕ್ತ ಉತ್ತರ ಪ್ರದೇಶದಲ್ಲಿ ಇದನ್ನು ಜಾರಿಗೊಳಿಸುವ ಯತ್ನದಲ್ಲಿದೆ.
ಉತ್ತರ ಪ್ರದೇಶದಲ್ಲಿನ ರಾಹುಲ್ ಹಿಡಿತಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿಯ ಆಯಕಟ್ಟಿನ ಜಾಗದಲ್ಲಿ ಮತ್ತೊಬ್ಬ ಗಾಂಧಿಯನ್ನು ತಂದಲ್ಲಿ ಪಕ್ಷದ ಪುನಶ್ಚೇತನಕ್ಕೆ ಕಾರಣವಾಗಬಹುದು ಎಂಬ ನಿರೀಕ್ಷೆ ಹಲವು ಬಿಜೆಪಿ ನಾಯಕರದ್ದು. ಆ ಮೂಲಕ ಕಮರಿ ಹೋಗಿರುವ ಬಿಜೆಪಿ ಜನಪ್ರಿಯತೆಯನ್ನು ಮತ್ತೆ ಪಡೆದುಕೊಳ್ಳಲು ಯುವಜನತೆಯ ಮೂಲಕ ವರುಣ್‌ಗೆ ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
PTI
ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಾಕಷ್ಟು ಹಿರಿಯ ನಾಯಕರಿರುವ ಹೊರತಾಗಿಯೂ ಪಕ್ಷವು ಇಲ್ಲಿ ಕುಂಟುತ್ತಾ ಸಾಗುತ್ತಿದೆ. ಒಂದು ಕಾಲದಲ್ಲಿ ಇಡೀ ಉತ್ತರ ಪ್ರದೇಶವನ್ನೇ ತನ್ನ ಹಿಡಿತಕ್ಕೆ ಪಡೆದುಕೊಂಡಿದ್ದ ಬಿಜೆಪಿ ಈಗ ಶೇ.10ರ ಪ್ರಭಾವವನ್ನೂ ಹೊಂದಿಲ್ಲ. ಆದರೆ ಇತ್ತೀಚೆಗೆ ವರುಣ್ ಗಾಂಧಿ ನಡೆಸಿರುವ ಕೆಲವು ರ‌್ಯಾಲಿಗಳಲ್ಲಿ ಜನತೆ ಪ್ರವಾಹೋಪಾದಿಯಲ್ಲಿ ಆಗಮಿಸಿರುವುದನ್ನು ನೋಡಿರುವ ಬಿಜೆಪಿ, ಇದನ್ನೇ ಲಾಭವಾಗಿ ಪರಿವರ್ತಿಸಲು ಯೋಚಿಸುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದ ಬುಲಾಂದ್‌ಶೇರ್ ಪ್ರಾಂತ್ಯದಲ್ಲಿ ಸಾರ್ವಜನಿಕ ರ‌್ಯಾಲಿಯೊಂದನ್ನು ನಡೆಸಿದ ಬಳಿಕ, ಪೂರ್ವ ಭಾಗದ ಸುಲ್ತಾನಪುರ್ ಎಂಬಲ್ಲೂ ಬೃಹತ್ ಸಭೆಯನ್ನು ಯಶಸ್ವಿಯಾಗಿ ನಡೆಸಿದ್ದರು.
ಇಂತಹ ಮತ್ತಷ್ಟು ಸಮಾವೇಶಗಳನ್ನು ನಡೆಸುವ ಯೋಜನೆಗಳನ್ನು ಹೊಂದಿರುವ ರಾಜ್ಯ ಬಿಜೆಪಿ, ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ಪಕ್ಷದಲ್ಲಿ ಚೈತನ್ಯ ಹುಟ್ಟಿಸಲು ಮುಂದಿನ ಕೆಲವು ತಿಂಗಳುಗಳಲ್ಲಿ ರ‌್ಯಾಲಿಗಳನ್ನು ನಡೆಸಲಿದೆ.
ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಮತ್ತು ಮುಲಾಯಂ ಸಿಂಗ್‌ರ ಸಮಾಜವಾದಿ ಪಕ್ಷಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಕಳೆಗುಂದುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ. ಇದಕ್ಕಾಗಿ ಕಾಂಗ್ರೆಸ್ ರಾಹುಲ್ ಗಾಂಧಿಯವರನ್ನು ಬಳಸುತ್ತಿದ್ದರೆ, ಇತ್ತ ಬಿಜೆಪಿ ವರುಣ್ ಗಾಂಧಿಯವರನ್ನು ವೇದಿಕೆ ಹತ್ತಿಸುವ ಯತ್ನದಲ್ಲಿದೆ.