ಶಾರೂಖ್ ಟೀಕಿಸೋರಿಗೆ ಅಮಿತಾಬ್ ಕಾಣಿಸ್ತಿಲ್ವಾ?: ರಾಜ್ ಠಾಕ್ರೆ
ಮುಂಬೈ, ಗುರುವಾರ, 11 ಫೆಬ್ರವರಿ 2010( 15:04 IST )
ಪಾಕಿಸ್ತಾನಿ ಕಲಾವಿದರ ಜತೆ ವೇದಿಕೆ ಹಂಚಿಕೊಳ್ಳುವ ಅಮಿತಾಬ್ ಬಚ್ಚನ್‌ಗೆ ಇಲ್ಲದ ವಿರೋಧ, ಪಾಕಿಸ್ತಾನಿ ಕ್ರಿಕೆಟಿಗರ ಪರವಹಿಸಿ ಮಾತನಾಡಿರುವ ಶಾರೂಖ್ ಖಾನ್‌ಗೆ ಏಕೆ ಎಂದು ಪ್ರಶ್ನಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಶಿವಸೇನೆಯ ಇಬ್ಬಂದಿತನವನ್ನು ತೀವ್ರವಾಗಿ ಟೀಕಿಸುತ್ತಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಹೊರಟಿದ್ದಾರೆ.
ಪಾಕಿಸ್ತಾನಿ ಕ್ರಿಕೆಟಿಗರ ಬಗ್ಗೆ ನೀಡಿರುವ ಹೇಳಿಕೆಗಾಗಿ ಅವರು ಶಾರೂಖ್ ಖಾನ್‌ರಿಂದ ಕ್ಷಮೆಯಾಚನೆಯನ್ನು ಬಯಸುತ್ತಿದ್ದಾರೆ. ಆದರೆ ಕೆಲವು ದಿನಗಳ ಹಿಂದಷ್ಟೇ ಅಮಿತಾಬ್ ಪಾಕಿಸ್ತಾನಿ ಕಲಾವಿದರ ಜತೆ ವೇದಿಕೆ ಹಂಚಿಕೊಂಡಿದ್ದಲ್ಲದೆ ಅವರ ಕಾವ್ಯಗಳನ್ನೂ ವಾಚಿಸಿದ್ದರು. ಶಾರೂಖ್ ಕ್ಷಮೆ ಕೇಳಬೇಕೆಂದರೆ, ಬಚ್ಚನ್ ಯಾಕೆ ಕೇಳಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಜ್ ಪ್ರಶ್ನಿಸಿದ್ದಾರೆ.
ಶಿವಸೇನೆ ವರಿಷ್ಠ ಬಾಳಾ ಠಾಕ್ರೆಯವರ ಸ್ವಂತ ಅಳಿಯನಾಗಿರುವ ರಾಜ್ ಠಾಕ್ರೆ ಶಿವಸೇನೆಯನ್ನು ಕಟುವಾಗಿ ಟೀಕಿಸಿದ್ದು, ಬಚ್ಚನ್ ಮತ್ತು ಠಾಕ್ರೆ ಕುಟುಂಬದ ನಡುವಿನ ಆಪ್ತ ಸಂಬಂಧ ಇದಕ್ಕೆ ಕಾರಣ ಎಂದು ವಿಶ್ಲೇಷಣೆ ನಡೆಸಿದ್ದಾರೆ.
ಶಾರೂಖ್ ಒಬ್ಬರನ್ನೇ ಯಾಕೆ ಗುರಿ ಮಾಡಬೇಕು ಎಂದಿರುವ ಎಂಎನ್ಎಸ್ ಮುಖ್ಯಸ್ಥ, ತನ್ನ ಪಕ್ಷವು ಬಾಲಿವುಡ್ ನಟನ ನೂತನ ಚಿತ್ರ 'ಮೈ ನೇಮ್ ಈಸ್ ಖಾನ್'ಗೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾರೂಖ್‌ರನ್ನು ಕೇವಲ ಪ್ರಚಾರಕ್ಕಾಗಿ ಮಾತ್ರ ವಿರೋಧಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ರಾಜ್, ಇಷ್ಟು ದೊಡ್ಡ ವಿವಾದ ಮಾಡುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತಾನು ಈ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುವುದಿಲ್ಲ ಎಂದು ಶಿವಸೇನೆಯ ಹೆಸರು ಪ್ರಸ್ತಾಪಿಸದೆ ಟೀಕಾ ಪ್ರಹಾರ ಮಾಡಿದರು.
ಶಾರೂಖ್‌ಗೂ ರಾಜ್ ತರಾಟೆ... ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರರ ಕುರಿತು ಪ್ರತಿಕ್ರಿಯೆ ನೀಡುವ ಅಗತ್ಯ ಶಾರೂಖ್‌ಗೆ ಏನಿತ್ತು? ಅವರದ್ದು ಕೂಡ ಪ್ರಚಾರ ಗಿಮಿಕ್ಕೇ? ನನಗೆ ಗೊತ್ತಿಲ್ಲ. ಆದರೆ ಅವರಿಗೆ ಪಾಕ್ ಆಟಗಾರರ ಮೇಲೆ ಅಷ್ಟು ಕರುಣೆಯಿದ್ದರೆ ಯಾಕೆ ನಿಗೂಢ ಹರಾಜಿನ ಸಂದರ್ಭದಲ್ಲಿ ಖರೀದಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.