ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗಿರುವ ಭಾರತೀಯರು ಭಯೋತ್ಪಾದನೆ ಕೈ ಬಿಟ್ಟು ಶರಣಾಗಲು ಸಿದ್ಧರಿದ್ದಲ್ಲಿ ಅವರನ್ನು ಸ್ವಾಗತಿಸಲು ತಾನು ಸಿದ್ಧ ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರಕಾರವೂ ಜಮ್ಮು ಮತ್ತು ಕಾಶ್ಮೀರ ಸರಕಾರದ ಧ್ವನಿಯನ್ನು ಪ್ರತಿಧ್ವನಿಸಿದೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಪ್ರಸ್ತಾಪವನ್ನು ಉಲ್ಲೇಖಿಸುತ್ತಾ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿರುವ ಯಾವುದೇ ಭಾರತೀಯರು ವಾಪಸ್ ಬರುವುದಾದಲ್ಲಿ ಭಾರತ ಅದನ್ನು ಸ್ವಾಗತಿಸುತ್ತದೆ. ಅದಕ್ಕೆ ಅಗತ್ಯವಿರುವ ಕಾನೂನುಗಳನ್ನು ಸರಕಾರ ರೂಪಿಸಲಿದೆ. ಆದರೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ ಎಂದರು.
PTI
ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನೇಮಿಸಿದ್ದವುಗಳಲ್ಲಿ ಒಂದು 'ಕಾರ್ಯನಿರತ ಸಮಿತಿ'ಯು ನೀಡಿದ ಶಿಫಾರಸುಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿಸಿರುವ ಅವರು, ಜಮ್ಮು-ಕಾಶ್ಮೀರ ಮುಖ್ಯಮಂತ್ರಿಯವರ ಈ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ. ಅದನ್ನೀಗ ಕಾರ್ಯಯೋಜನೆಗೆ ತರುವ ಸಂಬಂಧ ಪ್ರಕ್ರಿಯೆಗಳು ನಡೆಯಬೇಕಿದೆ ಎಂದರು.
ಅಲ್ಲದೆ ಅಲ್ಲಿಂದ ವಾಪಸ್ ಬರುವವರನ್ನು ಯೋಜನೆಯೊಂದರ ಮುಖಾಂತರ ನಿಯಮಬದ್ಧವಾಗಿ ಗುರುತಿಸುವುದು, ತಪಾಸಣೆ, ಪ್ರಯಾಣ, ಸಂಪೂರ್ಣ ವಿವರಗಳನ್ನು ಪಡೆಯುವುದು, ಪುನಶ್ಚೇತನ ಮತ್ತು ಪುನರ್ಜತೀಕರಣಗಳ ಮೂಲಕ ಸ್ವೀಕರಿಸಲಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮತ್ತು ಸಂಪುಟ ಸಭೆಗಳನ್ನು ನಡೆಸಿದ ನಂತರ ಗೃಹಸಚಿವರು ಪ್ರಶ್ನೆಗಳಿಗೆ ಉತ್ತರಿಸಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವೆಂದರೆ ಅದು ಭಾರತದ ಭೂಪ್ರದೇಶವೇ ಆಗಿದೆ ಎಂದ ಅವರು, ನಿಯಂತ್ರಣ ರೇಖೆಯನ್ನು 'ಕೆಲವು ಕಾರಣಗಳಿಗಾಗಿ' ದಾಟಿದವರು ಮರಳಲು ನಿರ್ಧರಿಸಿದರೆ ಅವರಿಗೆ ಹಾದಿ ಸುಗಮಗೊಳಿಸುವುದು ಅಗತ್ಯವಾಗಿದೆ ಎಂದರು.
ಜಮ್ಮು-ಕಾಶ್ಮೀರ ಸರಕಾರದ ಕ್ರಮವನ್ನು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಗುಲಾಂ ನಬೀ ಅಜಾದ್ ಟೀಕಿಸಿರುವ ಬೆನ್ನಿಗೆ ಸಂಪುಟ ಸಹೋದ್ಯೋಗಿಯ ಹೇಳಿಕೆಗೆ ಗೃಹಸಚಿವರು ವ್ಯತಿರಿಕ್ತ ಹೇಳಿಕೆ ನೀಡಿರುವುದು ಕುತೂಹಲ ಹುಟ್ಟಿಸಿದೆ.
1989ರ ನಂತರ ಸಾವಿರಾರು ಕಾಶ್ಮೀರಿ ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳಲು ನಿಯಂತ್ರಣ ರೇಖೆಯನ್ನು ದಾಟಿ ಹೋಗಿದ್ದರು. ಅವರಲ್ಲಿ ಕೆಲವರು ನುಸುಳಿಕೊಂಡು ವಾಪಸಾಗಿದ್ದರೆ, ಹೆಚ್ಚಿನವರು ಇನ್ನೂ ಅಲ್ಲೇ ಉಳಿದುಕೊಂಡಿದ್ದಾರೆ. ಅವರಲ್ಲಿ ಸುಮಾರು 800ರಷ್ಟು ಮಂದಿ ತಾವು ಮರಳಲು ಬಯಸುತ್ತಿರುವುದನ್ನು ವಿವಿಧ ಮೂಲಗಳ ಮೂಲಕ ಹೇಳುತ್ತಾ ಬಂದಿದ್ದಾರೆ.