ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾರೂಖ್-ಸೇನೆ ವಿವಾದ; ಮಹಾರಾಷ್ಟ್ರದಲ್ಲಿ ಚಿತ್ರ ಬಿಡುಗಡೆಯಿಲ್ಲ
(BIG Cinemas | Shah Rukh Khan | My Name is Khan | Shiv Sena)
ಶಾರೂಖ್-ಸೇನೆ ವಿವಾದ; ಮಹಾರಾಷ್ಟ್ರದಲ್ಲಿ ಚಿತ್ರ ಬಿಡುಗಡೆಯಿಲ್ಲ
ಮುಂಬೈ, ಗುರುವಾರ, 11 ಫೆಬ್ರವರಿ 2010( 18:46 IST )
ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಸೇನೆಯ ಬೆದರಿಕೆಗೆ ಜಗ್ಗಿರುವ ಮಹಾರಾಷ್ಟ್ರದ ಸಿನಿಮಾ ಮಂದಿರಗಳು, ಶಾರೂಖ್ ಖಾನ್ ನಾಯಕರಾಗಿರುವ 'ಮೇ ನೇಮ್ ಈಸ್ ಖಾನ್' ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡದಿರಲು ನಿರ್ಧರಿಸಿವೆ.
ಮುಂಬೈಯಲ್ಲಿ ಸಭೆ ನಡೆಸಿದ ಮಲ್ಟಿಪ್ಲೆಕ್ಸ್ ಥಿಯೇಟರುಗಳ ಮಾಲಕರು ಮಹಾರಾಷ್ಟ್ರದಾದ್ಯಂತದ 47 ನಗರಗಳ ಮಲ್ಟಿಪ್ಲೆಕ್ಸ್‌ಗಳು ಹಾಗೂ ಇತರ ಸಿನಿಮಾ ಮಂದಿರಗಳಲ್ಲಿ 'ಮೈ ನೇಮ್ ಈಸ್ ಖಾನ್' ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಈ ಸಭೆಯಲ್ಲಿ ಬಿಗ್ ಸಿನಿಮಾಸ್, ಇನೋಕ್ಸ್ ಮತ್ತು ಪಿವಿಆರ್ ಸೇರಿದಂತೆ ಹಲವು ಕಂಪನಿಗಳು ಭಾಗವಹಿಸಿದ್ದವು ಎಂದು ಮೂಲಗಳು ಹೇಳಿವೆ.
ಬುಧವಾರ ಮುಂಗಡ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳಿಸಿದ್ದ ಫನ್, ಆಡ್‌ಲ್ಯಾಬ್ಸ್ ಮುಂತಾದ ಕೆಲವು ಮಲ್ಟಿಪ್ಲೆಕ್ಸ್‌ಗಳು ಇಂದು ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಹೇಳಲಾಗಿದೆ.
ಸಿನಿಮಾ ಬಿಡುಗಡೆ ಮುಂಚಿನ ದಿನ ಗುರುವಾರ ಸಭೆ ಸೇರಿರುವ ಬಹುತೇಕ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಥಿಯೇಟರ್ ಮಾಲಕರು, ಶಿವಸೇನೆ ಬೆದರಿಕೆ ಹಾಕಿರುವುದರಿಂದ 'ಮೈ ನೇಮ್ ಈಸ್ ಖಾನ್' ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಚಿತ್ರದ ನಿರ್ಮಾಪಕರಾದ ಧರ್ಮಾ ಪ್ರೊಡಕ್ಷನ್ಸ್ ಮತ್ತು ಥಿಯೇಟರ್ ಮಾಲಕರ ನಡುವೆ ಸಂಧಾನ ನಡೆಯುತ್ತಿದ್ದು, ಶಾರೂಖ್ ಖಾನ್ ಅವರ ಮಧ್ಯಸ್ತಿಕೆಯೊಂದಿಗೆ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳಲಾಗುತ್ತದೆ ಎಂದು ವರದಿಗಳು ಹೇಳಿವೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಮಲ್ಟಿಪ್ಲೆಕ್ಸ್‌ಗಳೇ ಸಿನಿಮಾಗಳ ಗಳಿಕೆಗೆ ಪ್ರಮುಖವಾಗಿರುವುದರಿಂದ ಇದು ಮಹತ್ವದ ಹಿನ್ನಡೆ. ಚಿತ್ರಕ್ಕೆ ಸುಮಾರು 40ರಿಂದ 50 ಕೋಟಿಗಳಷ್ಟು ನಷ್ಟವಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ಶಿವಸೈನಿಕರು ಕುಕೃತ್ಯ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರ ಭರವಸೆ ನೀಡಿದ ಹೊರತಾಗಿಯೂ ಥಿಯೇಟರ್ ಮಾಲಕರು ತಮ್ಮ ಹೆಜ್ಜೆ ಹಿಂದಕ್ಕಿಟ್ಟಿದ್ದಾರೆ. ನಗರ ಪೊಲೀಸರು ಮತ್ತು ಮುಖ್ಯಮಂತ್ರಿ ಅಶೋಕ್ ಚೌಹಾನ್ ಕೂಡ ಸಿನಿಮಾ ಬಿಡುಗಡೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು.
ಶಾರೂಖ್ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಪರವಾಗಿ ಮಾತನಾಡಿದ್ದಾರೆ, ಅವರು ಕ್ಷಮೆ ಯಾಚಿಸದ ಹೊರತು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಹಾಗೂ ಬಿಡುಗಡೆಗೆ ಥಿಯೇಟರುಗಳು ಮುಂದಾದಲ್ಲಿ ತಕ್ಕ ಪರಿಣಾಮವನ್ನು ಎದುರಿಸಲು ಸಿದ್ಧರಾಗಬೇಕು ಎಂದು ಶಿವಸೇನೆ ಎಚ್ಚರಿಕೆ ನೀಡಿತ್ತು.