ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೆರೆಮನೆ ಬಾಲಕಿಯ ಉಸಿರುಗಟ್ಟಿಸಿ ಕೊಂದ ಪಾನಮತ್ತ ಪೊಲೀಸ್ (Tiruvottiyur | police constable | Mariaselvam | Rishita)
Bookmark and Share Feedback Print
 
ಕಂಠಪೂರ್ತಿ ಕುಡಿದಿದ್ದ ತಮಿಳುನಾಡು ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಪಕ್ಕದ ಮನೆಯ ಪುಟ್ಟ ಹುಡುಗಿಯ ಮೇಲೆ ಆಯತಪ್ಪಿ ಬಿದ್ದ ನಂತರ ಮಗು ಕೂಗಲು ಆರಂಭಿಸಿದಾಗ ಉಸಿರುಗಟ್ಟಿಸಿ ಸಾಯಿಸಿದ ಹೇಯ ಘಟನೆಯೊಂದು ವರದಿಯಾಗಿದೆ.

ಇದು ನಡೆದಿರುವುದು ಚೆನ್ನೈಯ ತಿರುವೊಟ್ಟಿಯೂರ್‌ನಲ್ಲಿನ ಸಾಂತುಮಾ ನಗರ ಎಂಬಲ್ಲಿ. ರವಿ ಮತ್ತು ಸೆಲ್ವಿ ಎಂಬ ದಂಪತಿಯ ಮೂರರ ಹರೆಯದ ಪುತ್ರಿ ರಿಷ್ತಾ ಕೊಲೆಯಾಗಿರುವುದು. ಕುಡುಕ ಪೊಲೀಸನ ಹೆಸರು ಮರಿಯಾಸೆಲ್ವಂ.

ಆತ ಕೌಟುಂಬಿಕ ಸ್ನೇಹಿತ...
ರಿಷ್ತಾಳ ತಂದೆ ರವಿ ಮುಂಬೈಯ ರೆಸ್ಟಾರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಸೆಲ್ವಿ ಸಂಜೆ ಹೊತ್ತು ಪಕ್ಕದಲ್ಲಿನ ನ್ಯೂ ವಾಶೆರಮ್ಯಾನ್‌ಪೇಟ್ ಎಂಬಲ್ಲಿ ಇಡ್ಲಿ ಮಾರಾಟ ಮಾಡಿ ಸಂಸಾರವನ್ನು ಸರಿದೂಗಿಸುತ್ತಿದ್ದಾರೆ. ಆರೋಪಿ ಪೊಲೀಸ್ ಇಲ್ಲಿಗೆ ಇಡ್ಲಿ ಕೊಳ್ಳಲೆಂದು ಬರಬರುತ್ತಾ ಈ ಕುಟುಂಬದ ಸ್ನೇಹ ಸಂಪಾದಿಸಿದ್ದ.

ಸೆಲ್ವಿ ರಾತ್ರಿ 11ಕ್ಕೆ ಮನೆಗೆ ಬಂದಾಗ ಮಗಳು ಇರಲಿಲ್ಲ. ಪಕ್ಕದ ಮನೆಗಳಲ್ಲೂ ವಿಚಾರಿಸಿ ಸಾಕಷ್ಟು ಹುಡುಕಾಡಿದ್ದರು. ಈ ಸಂದರ್ಭದಲ್ಲಿ ಯಾರದೋ ಮೂಲಕ ವಿಚಾರ ತಿಳಿದವನಂತೆ ಮರಿಯಸೆಲ್ವಂ ಕೂಡ ಸೆಲ್ವಿ ಮನೆಗೆ ಬಂದು ಕಳಕಳಿ ವ್ಯಕ್ತಪಡಿಸಿದ್ದ. ನಂತರ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಬಾಲಕಿ ಅತ್ತಿದ್ದೇ ಮುಳುವಾಯ್ತು...
ಸಂಜೆ ಹೊತ್ತು ಮರಿಯಸೆಲ್ವಂ ಬಾಲಕಿ ರಿಷ್ತಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆಗಲೇ ಕಂಠಪೂರ್ತಿ ಕುಡಿದಿದ್ದ ಆತ ಅಟ್ಟದ ಮೇಲಿಟ್ಟಿದ್ದ ಮದ್ಯದ ಬಾಟಲಿಯನ್ನು ತೆಗೆಯಲೆಂದು ಸ್ಟೂಲ್ ಮೇಲೆ ನಿಂತಿದ್ದಾಗ ಆಯತಪ್ಪಿ ಕೆಳಗೆ ಕುಳಿತಿದ್ದ ಬಾಲಕಿಯ ಮೇಲೆ ಬಿದ್ದಿದ್ದ.

ಈ ಸಂದರ್ಭದಲ್ಲಿ ರಿಷ್ತಾ ಜೋರಾಗಿ ಅಳಲು ಆರಂಭಿಸಿದ್ದಳು. ಇದನ್ನು ತಡೆಯಲು ಪಾನಮತ್ತನಾಗಿದ್ದ ಪೊಲೀಸ್ ಬಾಲಕಿಯ ಬಾಯಿಯನ್ನು ಗಟ್ಟಿಯಾಗಿ ಒತ್ತಿ ಹಿಡಿದಿದ್ದ. ಸ್ವಲ್ಪವೇ ಹೊತ್ತಿನಲ್ಲಿ ಉಸಿರುಗಟ್ಟಿದ ಆಕೆ ಆತನ ಕೈಯಲ್ಲೇ ಸಾವನ್ನಪ್ಪಿದ್ದಳು.

ಹೆದರಿದ 33ರ ಹರೆಯದ ಮರಿಯಸೆಲ್ವಂ ಬಾಲಕಿಯ ಶವವನ್ನು ಸರಕಾರಿ ಗೋದಾಮೊಂದರ ಹಿಂದಿನ ಪೊದೆಗೆಸೆದು ಬಿಟ್ಟಿದ್ದ.

ಬಾಲಕಿಯನ್ನು ಪೊಲೀಸನ ಜತೆಗೆ ಕೊನೆಯ ಬಾರಿ ನೋಡಿದ್ದನ್ನು ಯಾರೋ ಇಲಾಖೆಗೆ ಮಾಹಿತಿ ನೀಡಿದ ನಂತರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಮುಗ್ಧನಂತೆ ವರ್ತಿಸಿದ್ದ ಪೊಲೀಸ್...
ಬಾಲಕಿ ನಾಪತ್ತೆಯಾದ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆ ತಂಡದಲ್ಲಿ ಮರಿಯಸೆಲ್ವಂ ಕೂಡ ಇದ್ದ. ತಾನು ಕೂಡ ಯಾವುದೇ ಸಂಶಯ ಬರದಂತೆ ನಡೆದುಕೊಂಡಿದ್ದ.

ಈ ಹೊತ್ತಿನಲ್ಲಿ ಗೋದಾಮಿನ ಹಿಂದೆ ಕೊಳೆತ ಶವ ಪೊಲೀಸರಿಗೆ ದೊರೆತಿದೆ. ಈ ಸಂದರ್ಭದಲ್ಲೂ ಮರಿಯಸೆಲ್ವಂ ಅಮಾಯಕನಂತೆ ನಡೆದುಕೊಂಡಿದ್ದ. ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದರಿಂದ ಗುರುತು ಹಿಡಿಯುವುದು ಕಷ್ಟವಾಗಿದ್ದರೂ, ಬಾಲಕಿಯ ತಾಯಿ 'ಇದು ತನ್ನ ಮಗಳೇ' ಎಂದು ಗುರುತಿಸಿದ್ದರು ಎಂದು ಇಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಕಸ್ಮಾತ್ ನಡೆದಿರುವ ವಾದವನ್ನು ಒಪ್ಪಬಹುದಾದರೂ ಮರಿಯಸೆಲ್ವಂ ಬಾಲಕಿಯನ್ನು ಆಸ್ಪತ್ರೆಗೂ ಕೊಂಡೊಯ್ದಿಲ್ಲ. ಹಾಗಾಗಿ ಆತನ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ