ಮುಸ್ಲಿಮರಿಗೆ ಉದ್ಯೋಗ ನೀಡಬೇಡಿ, ಮದರಸಾ ಮುಚ್ಚಿ: ವಿಎಚ್‌ಪಿ
ಅಮೃತಸರ, ಶುಕ್ರವಾರ, 12 ಫೆಬ್ರವರಿ 2010( 13:07 IST )
ಮುಸ್ಲಿಮರಿಗೆ ದೇಶದಲ್ಲಿ ಉದ್ಯೋಗ ನೀಡಬಾರದು. ಹಾಗೆ ಮಾಡಿದಲ್ಲಿ ಅವರು ಹಸಿವಿನಿಂದ ಬಳಲಿ ಪಾಕಿಸ್ತಾನಕ್ಕೆ ಹೊರಟು ಹೋಗುತ್ತಾರೆ ಎಂದಿರುವ ವಿಶ್ವ ಹಿಂದೂ ಪರಿಷತ್, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಲ್ಲಾ ಮದರಸಾಗಳನ್ನು ಮುಚ್ಚುವಂತೆ ಆಗ್ರಹಿಸಿದೆ.
ದೇಶದೆಲ್ಲೆಡೆಯ ಮದರಸಾಗಳು ಭಯೋತ್ಪಾದಕರ ಆಶ್ರಯ ತಾಣಗಳಾಗಿವೆ. ಹಾಗಾಗಿ ಎಲ್ಲಾ ಮದರಸಾಗಳನ್ನು ಮುಚ್ಚಬೇಕು ಎಂದು ಗುರುವಾರ ಅಮೃತಸರದ 'ಬಿಬಿಕೆ ಡಿಎವಿ' ಹುಡುಗಿಯರ ಕಾಲೇಜಿನಲ್ಲಿನ ವಿಚಾರಗೋಷ್ಠಿಯೊಂದಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ಭಾಯ್ ತೊಗಾಡಿಯಾ ಒತ್ತಾಯಿಸಿದರು.
ಕೇಂದ್ರ ಸರಕಾರದ ವಿರುದ್ಧವೂ ಹರಿಹಾಯ್ದಿರುವ ಅವರು, ಮುಸ್ಲಿಮರನ್ನು ಓಲೈಸುವುದನ್ನೇ ನೀತಿಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ನೇತೃತ್ವ ಯುಪಿಎ ದೇಶಕ್ಕೆ ಶುಭಶಕುನವಲ್ಲ. ಅವರಿಗೆ ದೇಶದ ಭವಿಷ್ಯದ ಕುರಿತು ಚಿಂತೆಯಿಲ್ಲ. ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡಬೇಕೆನ್ನುವುದನ್ನೂ ಅವರು ಗಂಭೀರವಾಗಿ ಸ್ವೀಕರಿಸಿಲ್ಲ ಎಂದು ಆರೋಪಿಸಿದರು.
ಮುಸ್ಲಿಮರ ಮೇಲಿನ ವಾಗ್ದಾಳಿ ಮುಂದುವರಿಸಿದ ತೊಗಾಡಿಯಾ, ಮುಸ್ಲಿಮರಿಗೆ ಭಾರತದಲ್ಲಿ ಉದ್ಯೋಗವೇ ದೊರಕದಿದ್ದಾಗ, ವ್ಯಾಪಾರ ಮತ್ತು ಉದ್ಯಮಗಳಲ್ಲಿ ಅವಕಾಶ ಸಿಗದೇ ಇದ್ದಾಗ ಅವರು ಹಸಿವೆಯಿಂದ ಸಾಯುವ ಸ್ಥಿತಿಗೆ ಬರುತ್ತಾರೆ; ಆಗ ಅವರು ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಚಿಂತಿಸುತ್ತಾರೆ. ಎಲ್ಲಾ ಹಿಂದೂಗಳು ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಮುಸ್ಲಿಮರ ಜತೆಗಿನ ವ್ಯಾಪಾರ ಸೇರಿದಂತೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದರು.
ಮುಸ್ಲಿಂ ಸಮುದಾಯವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುವವರಿಗೆ ನಾವು ಬೆಂಬಲ ನೀಡಬಾರದು. ಅಂತಹ ವ್ಯಕ್ತಿಗಳು ಪಾಕಿಸ್ತಾನಕ್ಕಾಗಿ ಭಾರತವನ್ನು ಬಿಟ್ಟು ಹೋಗಬೇಕು ಎಂದು ಕಿಡಿ ಕಾರಿದರು.
ಬಾಲಿವುಡ್ ನಟ ಶಾರೂಖ್ ಖಾನ್ ವಿರುದ್ಧವೂ ಕಿಡಿ ಕಾರಿರುವ ಅವರು, ಖಾನ್ ಚಿತ್ರವೊಂದಕ್ಕೆ ಕನಿಷ್ಠ 25 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿ ಹೇಗಿದೆ ಎಂಬುದನ್ನು ಇಂತಹ ಒಂದು ಪ್ರಸಂಗದಿಂದ ಊಹಿಸಬಹುದಾಗಿದೆ ಎಂದರು.