ವಾಲೆಂಟೈನ್ ಶ್ರೀಕೃಷ್ಣ; ಪ್ರೇಮಿಗಳಿಗಾಗಿ ಪ್ರೇಮಗುರುಗಳ ದೇವಸ್ಥಾನ
ಚೆನ್ನೈ, ಶುಕ್ರವಾರ, 12 ಫೆಬ್ರವರಿ 2010( 13:34 IST )
ವಾಲೆಂಟೈನ್ ಅನ್ನೋನು ಕ್ರಿಶ್ಚಿಯನ್ ಸಂತ ಮತ್ತು ವಾಲೆಂಟೈನ್ಸ್ ಡೇ ಎನ್ನುವುದು ವಿದೇಶಿ ಸಂಸ್ಕೃತಿಯ ಭಾಗವಾಗಿರಬಹುದು. ಇಂತಹ ಕಾರ್ಯಕ್ರಮಗಳಿಗೆ ಶ್ರೀರಾಮ ಸೇನೆ, ಶಿವಸೇನೆ ಮತ್ತು ವಿಶ್ವ ಹಿಂದೂ ಪರಿಷತ್‌ಗಳಂತಹ ಸಂಘಟನೆಗಳು ದಾಳಿಗಳನ್ನೂ ನಡೆಸಬಹುದು. ಆದರೆ ಪ್ರೇಮಿಗಳಿಗೆ ದೇವರುಗಳ ಮೂಲಕವೇ ಹರಸುವ ಹೊಸ ತಂತ್ರವನ್ನು ಅನುಸರಿಸಿದರೆ?
ಅಂತಹ ದೇಸೀ-ವಿದೇಶಿ ಸಂಸ್ಕೃತಿಯನ್ನು ಇಲ್ಲಿ ಮಿಳಿತಗೊಳಿಸುವ, ಪ್ರೀತಿಯನ್ನು ದೈವತ್ವಕ್ಕೇರಿಸುವ ಮೂಲಕ ದೇವಸ್ಥಾನವೊಂದನ್ನು ಪಕ್ಕದ ರಾಜ್ಯದಲ್ಲಿ ಕಟ್ಟಲಾಗುತ್ತಿದೆ. ದೇವಸ್ಥಾನದ ಹೆಸರೇ 'ವಾಲೆಂಟೈನ್ಸ್ ಶ್ರೀಕೃಷ್ಣ' ಎಂದು.
ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ಶೋಲಿಂಗೂರ್ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಈ ದೇವಸ್ಥಾನದ ಕತೃ ಪಂಚತಾರಾ ಹೊಟೇಲುಗಳಲ್ಲಿ ಆಹಾರ ಮತ್ತು ಪಾನೀಯಗಳ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದ ಅನುಭವವಿರುವ ಆರ್. ಜಗನ್ನಾಥ್ ಎಂಬವರು.
ಅವರ ಪ್ರಕಾರ, 'ಭಗವಾನ್ ಕೃಷ್ಣ ಎನ್ನುವುದು ಪ್ರೀತಿಯ ಸಂಕೇತ. ಶ್ರೀಕೃಷ್ಣನಿಗೆ 16008 ಪತ್ನಿಯರಿದ್ದರು. ಆತನಿಗೆ ನಿತ್ಯವೂ ವಾಲೆಂಟೈನ್ಸ್ ಡೇ. ಹಾಗಾಗಿ ನಾವು ವಾಲೆಂಟೈನ್ಸ್ ಶ್ರೀಕೃಷ್ಣ ಎಂದು ಹೆಸರಿಡಲು ನಿರ್ಧರಿಸಿದೆವು' ಎಂದು ಹೇಳುತ್ತಾರೆ.
ಭಗವಾನ್ ಕೃಷ್ಣನ ಪ್ರೇಮ ಸಾರ್ವತ್ರಿಕವಾದುದು. ಅದು ಚಿರಂತನವಾದದ್ದು. ಆತ ಎಲ್ಲರನ್ನೂ ಪ್ರೀತಿಸುತ್ತಾನೆ ಮತ್ತು ಪ್ರತಿಯೊಬ್ಬರೂ ಆತನನ್ನು ಪ್ರೀತಿಸುತ್ತಾರೆ. ಆತನ ಕಡೆಗಿನ ಪ್ರೀತಿಯನ್ನು ಭಜನೆಗಳು ಅಥವಾ ಶ್ಲೋಕಗಳ ಮೂಲಕ ವ್ಯಕ್ತಪಡಿಸಲಾಗುತ್ತದೆ ಎಂದು ಈ ಬಗ್ಗೆ ಪುಸ್ತಕವೊಂದನ್ನೂ ಬರೆಯುತ್ತಿರುವ ಜಗನ್ನಾಥ್ ವಿವರಿಸಿದ್ದಾರೆ.
12 ಅಡಿ ಗೋಪುರವನ್ನು ಹೊಂದಿರುವ 36 ಚದರ ಅಡಿ ವಿಸ್ತೀರ್ಣದ ಈ ದೇಗುಲ ಏಪ್ರಿಲ್ ಹೊತ್ತಿಗೆ ಉದ್ಘಾಟನೆಯಾಗಲಿದೆ.
ಗರ್ಭಗುಡಿಯಲ್ಲಿ ಶ್ರೀರಾಧಾಕೃಷ್ಣ ವಿಗ್ರಹವಿದ್ದರೆ, ಅಲ್ಲೇ ಕಾಲ ಬುಡದಲ್ಲಿ ಹಸುವಿನ ಮೂರ್ತಿಯಿರುತ್ತದೆ. ಅಲ್ಲದೆ ಕೃಷ್ಣ ತೊಟ್ಟಿಲಲ್ಲಿರುವ ಕೆತ್ತನೆಯೂ ಇರಲಿದೆ. ಹಸು ಎನ್ನುವುದು ಕೃಷ್ಣ ಪ್ರಾಣಿಗಳೆಡೆಗೆ ತೋರಿಸುವ ಪ್ರೀತಿಯ ಸಂಕೇತ ಎಂದು ಅವರು ಹೇಳಿದ್ದಾರೆ.
ಉತ್ತರ ಭಾರತಗಳ ದೇವಸ್ಥಾನಗಳಲ್ಲಿರುವಂತೆ ಇಲ್ಲಿ ಕೂಡ ದೇವರ ವಿಗ್ರಹವನ್ನು ಭಕ್ತರು ಸ್ಪರ್ಶಿಸಬಹುದಾಗಿದೆ. ಇತರ ದೇವಸ್ಥಾನಗಳಂತೆ ಇಲ್ಲಿ ಕೂಡ ನಿರ್ದಿಷ್ಟ ಸಮಯಗಳಲ್ಲಿ ಪೂಜೆ ವಿಧಿವಿಧಾನದಂತೆ ನಡೆಯುತ್ತದೆ. ವಾಲೆಂಟೈನ್ಸ್ ಡೇಯಂದು ಪ್ರೇಮಿಗಳು ವಿಶೇಷ ಪೂಜೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ವಾಲೆಂಟೈನ್ಸ್ ಶ್ರೀಕೃಷ್ಣ ದೇವಸ್ಥಾನ ಕಟ್ಟಬೇಕೆಂಬುದು ನನ್ನ ಬಾಲ್ಯದ ಕನಸಾಗಿತ್ತು. ಸಾಮಾನ್ಯವಾಗಿ ಜನತೆ ವಾಲೆಂಟೈನ್ಸ್ ಡೇಯಂದು ಶುಭಾಶಯ ಪತ್ರಗಳಲ್ಲಿ ಕೃಷ್ಣನ ಚಿತ್ರಗಳನ್ನು ಬಳಸುತ್ತಾರೆ. ಹಾಗಾಗಿ ಇದನ್ನೇ ದೈವಿಕ ರೂಪಕ್ಕೇರಿಸಲು ನಾನು ನಿರ್ಧರಿಸಿದೆ. ನನ್ನ ಪ್ರಕಾರ ಯಾವುದೇ ರೀತಿಯ ಪ್ರೀತಿಯೂ ಪವಿತ್ರವಾದದ್ದು ಮತ್ತು ಪೂಜಾರ್ಹವಾದದ್ದು. ಇಲ್ಲಿಗೆ ಬರುವ ಪ್ರೇಮಿಗಳನ್ನು ಮಾತ್ರ ದೇವರು ಹರಸುತ್ತಾನೆ ಎಂಬ ನಂಬಿಕೆಯೂ ನನಗಿದೆ ಎಂದು ಜಗನ್ನಾಥ್ ಹೇಳುತ್ತಾರೆ.