ದೇಶದೆಲ್ಲೆಡೆ ಶಾರೂಖ್ ಚಿತ್ರ ಬಿಡುಗಡೆ; ಶಿವಸೇನೆಗೆ ಮುಖಭಂಗ
ಮುಂಬೈ, ಶುಕ್ರವಾರ, 12 ಫೆಬ್ರವರಿ 2010( 15:26 IST )
ಶಾರೂಖ್ ಖಾನ್ ನಾಯಕರಾಗಿರುವ 'ಮೈ ನೇಮ್ ಈಸ್ ಖಾನ್' ಚಿತ್ರ ಶಿವಸೇನೆ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈಯ ಬೆರಳೆಣಿಕೆಯ ಥಿಯೇಟರುಗಳನ್ನು ಹೊರತುಪಡಿಸಿ ದೇಶದಾದ್ಯಂತ ಬಿಡುಗಡೆಯಾಗಿದ್ದು, ತುಂಬಿದ ಗೃಹಗಳಿಂದ ಪ್ರದರ್ಶನ ಕಂಡಿದೆ.
ಮುಂಬೈಯ ಬಹುತೇಕ ಮಲ್ಟಿಪ್ಲೆಕ್ಸ್ ಮಾಲಕರು ಚಿತ್ರವನ್ನು ಪ್ರದರ್ಶಿಸಲು ನಿರ್ಧರಿಸಿದರೆ, ತಕ್ಷಣಕ್ಕೆ ಚಿತ್ರ ಪ್ರದರ್ಶಿಸಲು ಮಾಮೂಲಿ ಥಿಯೇಟರ್ ಮಾಲಕರು ನಿರಾಕರಿಸಿದ್ದಾರೆ. ಆದರೆ ಅವರು ಇಂದು ತಡವಾಗಿ ಅಥವಾ ನಾಳೆಯಿಂದ ಚಿತ್ರ ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರೆ. ಪೊಲೀಸರು ಸಂಪೂರ್ಣ ಭದ್ರತೆ ನೀಡಿರುವುದರಿಂದ ಕೆಲವರು ಈಗಾಗಲೇ ಚಿತ್ರ ಪ್ರದರ್ಶನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಂಬಂಧಪಟ್ಟಂತೆ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಪರ ಹೇಳಿಕೆ ನೀಡಿದ ನಟ ಶಾರೂಖ್ ಖಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಿವಸೇನೆ, ಅವರ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಕೆಲವು ಕಡೆ ದಾಳಿಗಳನ್ನೂ ನಡೆಸುವ ಮೂಲಕ ಥಿಯೇಟರ್ ಮಾಲಕರಲ್ಲಿ ಭೀತಿ ಹುಟ್ಟಿಸಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ಸಭೆ ಸೇರಿದ್ದ ಸಿನಿಮಾ ಮಂದಿರಗಳ ಮಾಲಕರು ಚಿತ್ರ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದರು. ಆದರೆ ಇಂದು ಪೊಲೀಸರು ಸಂಪೂರ್ಣ ಭದ್ರತೆ ನೀಡಿದ ಕಾರಣ ಚಿತ್ರ ಬಿಡುಗಡೆ ಮಾಡಿದ್ದು, ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬಂದಿದೆ ಎಂದು ವರದಿಗಳು ಹೇಳಿವೆ.
ಗುಜರಾತ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ಮೊದಲ ಪ್ರದರ್ಶನವನ್ನು ರದ್ದು ಪಡಿಸಲಾಗಿತ್ತಾದರೂ, ನಂತರ ಮತ್ತೆ ಚಿತ್ರ ಪ್ರದರ್ಶನಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.
ದೆಹಲಿ, ಬೆಂಗಳೂರು, ಕೊಲ್ಕತ್ತಾ, ಚೆನ್ನೈ ಸೇರಿದಂತೆ ದೇಶದ ಎಲ್ಲಾ ನಗರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ತುಂಬಿದ ಗೃಹಗಳಿಂದ ಪ್ರದರ್ಶನವಾಗುತ್ತಿದೆ.
ದೆಹಲಿ ಮತ್ತು ಮುಂಬೈಯ ಕೆಲವು ಕಡೆ ಶಿವಸೈನಿಕರು ದಾಂಧಲೆ ನಡೆಸಲೆತ್ನಿಸಿರುವ ಘಟನೆಗಳು ವರದಿಯಾಗಿವೆ. ಆದರೆ ಪೊಲೀಸರು ಅವರನ್ನು ತಡೆದಿದ್ದು, ಬಂಧಿಸಿದ್ದಾರೆ. ಈಗಾಗಲೇ ಸುಮಾರು 2,000ದಷ್ಟು ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಶಿವಸೇನೆಯ ರಾಜಕೀಯ ಪಕ್ಷದ ನೋಂದಣಿಯನ್ನು ರದ್ದುಗೊಳಿಸಬೇಕೆಂದು ಮಹಾರಾಷ್ಟ್ರ ಕಂದಾಯ ಸಚಿವ ನಾರಾಯಣ ರಾಣೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.