ಅಭಿಮಾನಿಗಳೇ, ದಯವಿಟ್ಟು ನನ್ನನ್ನು ಕ್ಷಮಿಸಿ: ಶಾರೂಖ್ ಖಾನ್
ಮುಂಬೈ, ಶುಕ್ರವಾರ, 12 ಫೆಬ್ರವರಿ 2010( 18:52 IST )
ಕಳೆದ ಹಲವು ದಿನಗಳಿಂದ ಮುಂಬೈಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಮೂಲಕ ಕೊನೆಗೊಳ್ಳಬಹುದು ಎಂದು ಗ್ರಹಿಸಿದ್ದವರಿಗೆ ಶಾರೂಖ್ ಖಾನ್ ತಕ್ಷಣವೇ ಸ್ಪಷ್ಟನೆ ನೀಡಿದ್ದು, ಅಭಿಮಾನಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕೆ ಮಾತ್ರ ತಾನು ಕ್ಷಮೆ ಯಾಚಿಸಿದ್ದೇನೆಯೇ ಹೊರತು ಶಿವಸೇನೆಗಲ್ಲ ಎಂದು ತಿಳಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ನಿಮ್ಮಲ್ಲಿ ಒತ್ತಡ ಹೆಚ್ಚಿಸಿದ್ದಕ್ಕೆ ಕ್ಷಮೆ ಯಾಚಿಸುತ್ತಿದ್ದೇನೆ. ವಿನೀತನಾಗಿ ಹೇಗಿರಬೇಕು ಎಂಬುದರ ನೈಜಾರ್ಥ ನನಗೀಗ ತಿಳಿದಿದೆ. ನಿಮ್ಮನ್ನೆಲ್ಲ ತುಂಬಾ ಪ್ರೀತಿಸುತ್ತಿದ್ದೇನೆ. ಇಷ್ಟು ಪ್ರೀತಿಯಿಟ್ಟದ್ದಕ್ಕೆ ನಿಮಗೆಲ್ಲರಿಗೂ ಕೃತಜ್ಞತೆಗಳು ಎಂದು ಶಾರೂಖ್ ತನ್ನ ಟ್ವಿಟ್ಟರ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
ನನ್ನ ವರ್ತನೆ ಅಥವಾ ಭಾಷೆಗಾಗಿ ಸಹೃದಯಿಯಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ನಿಮ್ಮನ್ನು ತುಂಬಾ.. ತುಂಬಾ.. ಪ್ರೀತಿಸುತ್ತಿದ್ದೇನೆ. ಥ್ಯಾಂಕ್ಯೂ ಥ್ಯಾಂಕ್ಯೂ ಎಂದಿದ್ದಾರೆ.
ಉದ್ದೇಶ ಪೂರ್ವಕವಾಗಿ ಅಥವಾ ತಿಳಿಯದೆ ನಾನು ನೀಡಿದ್ದ ಯಾವುದೇ ಹೇಳಿಕೆಯಿಂದ ನನ್ನ ದೇಶ ಬಾಂಧವರಿಗೆ ನೋವಾಗಿದ್ದರೆ, ಅವರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ನಾನು ಭಾರತ ಮತ್ತು ಭಾರತೀಯರನ್ನು ಪ್ರೀತಿಸುತ್ತಿದ್ದೇನೆ. ಮುಂಬೈ ಮತ್ತು ಮುಂಬೈ ವಾಸಿಗಳನ್ನೂ ತುಂಬಾ ಪ್ರೀತಿಸುತ್ತಿದ್ದೇನೆ. ನನ್ನ ಮಾತುಗಳಿಂದ ನಿಮ್ಮನ್ನು ನೋಯಿಸಿದ್ದಕ್ಕೆ ಮತ್ತೊಮ್ಮೆ ತೀರಾ ದೀನನಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಅವರು ತನ್ನ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಅಲ್ಲದೆ ಈ ಹಿಂದೆಂದಿಗಿಂತಲೂ ಈಗ ಹೆಚ್ಚು ದೇಶಭಕ್ತನಾಗಿದ್ದೇನೆ ಎಂಬ ಭಾವನೆ ನನ್ನಲ್ಲಿದೆ ಎಂದು ಶಾರೂಖ್ ಹೇಳಿಕೊಂಡಿದ್ದಾರೆ.
ಆದರೆ ಇದು ಶಿವಸೇನೆಯಲ್ಲಿ ಕ್ಷಮೆ ಯಾಚಿಸಿರುವ ತಪ್ಪರ್ಥ ಕೊಡುವುದನ್ನು ಕಂಡುಕೊಂಡ ಶಾರೂಖ್ ತಕ್ಷಣವೇ ಸ್ಪಷ್ಟನೆ ನೀಡಿದ್ದು, ನಾನು ವಿಷಾದ ವ್ಯಕ್ತಪಡಿಸಿದ್ದು ಅಭಿಮಾನಿಗಳಿಗೆ-- ಶಿವಸೇನೆಗಲ್ಲ ಎಂದಿದ್ದಾರೆ.
ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಪರವಾಗಿ ಮಾತನಾಡಿದ್ದ ಶಾರೂಖ್ ಕ್ಷಮೆ ಯಾಚಿಸದ ಹೊರತು ಅವರ ಚಿತ್ರ ಬಿಡುಗಡೆಗೆ ಮುಂಬೈಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಬೆದರಿಕೆ ಹಾಕಿತ್ತು. ಆರಂಭದಲ್ಲಿ ಚಿತ್ರಮಂದಿರಗಳು ಭೀತಿಗೊಂಡಿದ್ದವಾದರೂ ಇದೀಗ ಬಹುತೇಕ ಥಿಯೇಟರುಗಳು 'ಮೈ ನೇಮ್ ಈಸ್ ಖಾನ್' ಚಿತ್ರವನ್ನು ಪ್ರದರ್ಶಿಸುತ್ತಿವೆ.