ಬಲವಂತವಾಗಿ ಮನೆ ತೊರೆದ ಪತಿ-ಪತ್ನಿಗೆ ವಿಚ್ಛೇದನವಿಲ್ಲ: ಸುಪ್ರೀಂ
ನವದೆಹಲಿ, ಶನಿವಾರ, 13 ಫೆಬ್ರವರಿ 2010( 08:32 IST )
ಸತತ ಕಿರುಕುಳ ಅಥವಾ ಚಿತ್ರಹಿಂಸೆ ಕಾರಣದಿಂದಲೇ ಮನೆ ತ್ಯಜಿಸುವಂತಾಯಿತು ಎಂದು ನ್ಯಾಯಾಲಯದಲ್ಲಿ ರುಜುವಾತುಪಡಿಸಿದರೆ ಅಂತಹ ಗಂಡ ಅಥವಾ ಹೆಂಡತಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ.
ಹೆಂಡತಿಯಾದವಳಿಗೆ ಸತತ ಹಿಂಸೆ ಅಥವಾ ಕಿರುಕುಳ ನೀಡಿದ ಕಾರಣದಿಂದ ಆಕೆ ತನ್ನ ಗಂಡನ ಮನೆಯನ್ನು ತ್ಯಜಿಸಿ, ಪ್ರತ್ಯೇಕವಾಗಿ ವಾಸಿಸುತ್ತಿದ್ದಲ್ಲಿ ಅದನ್ನು ಗಂಡನಾದವನು 'ಹೆಂಡತಿ ನನ್ನನ್ನು ಪರಿತ್ಯಜಿಸಿದ್ದಾಳೆ' ಎಂಬ ನೆಲೆಯಲ್ಲಿ ಹಿಂದೂ ವಿವಾಹ ಕಾಯ್ದೆಯ ಪ್ರಕಾರ ವಿವಾಹ ವಿಚ್ಛೇದನ ನೀಡಲಾಗದು ಎಂದು ಪಿ. ಶಾಂತಶಿವಂ ಮತ್ತು ಅಶೋಕ್ ಕುಮಾರ್ ಗಂಗೂಲಿಯವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ.
ಹೆಂಡತಿಗೆ ನಿರಂತರ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಆಕೆ ಗಂಡನ ಮನೆಯನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದುದನ್ನು ರುಜುವಾತುಪಡಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಗಂಡ ರವಿ ಕುಮಾರ್ ವಿಚ್ಛೇದನಕ್ಕಾಗಿ ನೀಡಿದ್ದ 'ಪರಿತ್ಯಾಗ' ಎಂಬ ನೆಲೆಯನ್ನು ತಳ್ಳಿ ಹಾಕಿತು.
ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಗಂಡ ಅಥವಾ ಹೆಂಡತಿ ಒಬ್ಬರನ್ನೊಬ್ಬರು ಪರಿತ್ಯಜಿಸಿ ವಾಸಿಸುತ್ತಿದ್ದರೆ ಅಂತವರ ವಿವಾಹವನ್ನು ರದ್ದುಗೊಳಿಸಬಹುದಾಗಿದೆ.
ಈ ಬಗ್ಗೆ ವಿವರಣೆ ನೀಡಿರುವ ನ್ಯಾಯಾಲಯವು, ತನ್ನ ಹೆಂಡತಿಗೆ ಅರ್ಜಿದಾರ ಮತ್ತು ಗಂಡ ಕ್ರೂರ ಚಿತ್ರಹಿಂಸೆ ನೀಡಿರುವುದನ್ನು ಮಗು ಸ್ಪಷ್ಟವಾಗಿ ಹೇಳಿದೆ; ಹಾಗಾಗಿ ಹೆಂಡತಿ ಪ್ರತ್ಯೇಕವಾಗಿ ವಾಸಿಸಲು ಇಲ್ಲಿ ಸಾಕಷ್ಟು ಕಾರಣವಿದೆ. ಇಂತಹ ಪ್ರಕರಣಗಳಲ್ಲಿ ಹೆಂಡತಿ ಕ್ರೂರಿ ಅಥವಾ ಪರಿತ್ಯಾಗ ಮಾಡಿರುವುದಕ್ಕಾಗಿ ತಪ್ಪಿತಸ್ಥಳು ಎಂದು ಹೇಳಲಾಗದು ಎಂದಿದೆ.
ಮನೆ ತೊರೆಯುವಂತೆ ಅಪ್ಪನಾದವನು ಅಮ್ಮನಿಗೆ ನಿರಂತರ ಹಿಂಸೆ ನೀಡಿರುವುದನ್ನು ಮಗು ಪ್ರಮಾಣಿಕೃತಗೊಳಿಸಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ರವಿ ಕುಮಾರ್ ಅವರ ವಿವಾಹ ವಿಚ್ಛೇದನವನ್ನು ರದ್ದುಗೊಳಿಸಿರುವುದು ಸರಿಯಾಗಿಯೇ ಇದೆ ಎಂದು ನ್ಯಾಯಾಲಯವು ಹೇಳಿದೆ.