ಪಿಒಕೆ ಪ್ರಸ್ತಾಪ ಕಾನೂನುಬದ್ಧ ನುಸುಳುವಿಕೆಗೆ ಸಮ: ಬಿಜೆಪಿ ಆಕ್ಷೇಪ
ನವದೆಹಲಿ, ಶನಿವಾರ, 13 ಫೆಬ್ರವರಿ 2010( 09:40 IST )
ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿರುವ ಭಾರತೀಯರಿಗೆ ಮರಳಲು ಅವಕಾಶ ನೀಡುವ ಪ್ರಸ್ತಾಪದ ಕುರಿತು ಹೇಳಿಕೆ ನೀಡಿದ್ದ ಗೃಹಸಚಿವ ಪಿ. ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಇದು ಅಕ್ರಮ ನುಸುಳುವಿಕೆಯನ್ನು ಕಾನೂನುಸಮ್ಮತಗೊಳಿಸಿದಂತಾಗುತ್ತದೆ ಎಂದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗಿರುವ ಭಾರತೀಯರು ಮರಳಿದಲ್ಲಿ ಸ್ವೀಕರಿಸಲಾಗುತ್ತದೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಪ್ರಸ್ತಾಪವನ್ನು ಸ್ವಾಗತಿಸಿರುವ ಪಿ. ಚಿದಂಬರಂ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಇದು ಒಳನುಸುಳುವಿಕೆಯನ್ನು ಅಧಿಕೃತಗೊಳಿಸುವುದಲ್ಲದೆ ಮತ್ತೇನಲ್ಲ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಕಳೆದ ದಶಕಗಳ ಅವಧಿಯಲ್ಲಿ ಭಾರತ ವಶದಲ್ಲಿರುವ ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೆಂಬಲಿಸಲು ಸಾವಿರಾರು ಯುವಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನಿಯಂತ್ರಣ ರೇಖೆಯನ್ನು ದಾಟಿ ಹೋಗಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ವಾಪಸಾಗಿದ್ದರೆ, ಉಳಿದ ಸುಮಾರು 800ರಷ್ಟು ಮಂದಿ ಬೇರೆಬೇರೆ ಮೂಲಗಳ ಮೂಲಕ ತಾವು ಮರಳಲು ಇಚ್ಛಿಸುತ್ತಿರುವುದನ್ನು ತೋಡಿಕೊಂಡಿದ್ದಾರೆ. ಅದಕ್ಕಾಗಿ ಜಮ್ಮು-ಕಾಶ್ಮೀರ ಸರಕಾರವು ವ್ಯವಸ್ಥೆಯೊಂದನ್ನು ರೂಪಿಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಇದಕ್ಕೆ ಚಿದಂಬರಂ ಬೆಂಬಲ ಸೂಚಿಸಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಮತ್ತು ಉಗ್ರ ತರಬೇತಿಗಾಗಿ ತೆರಳಿದ್ದ ಈ ಭಾರತೀಯ ಯುವಕರು ದೇಶಕ್ಕೆ ಮರಳಿದ ನಂತರ ಯುದ್ಧ ಸನ್ನದ್ಧರಾಗಿ ಪಾಕಿಸ್ತಾನದ ಆದೇಶಕ್ಕಾಗಿ ಕಾಯುತ್ತಾರೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಅಲ್ಲಿಂದ ಬರುವ ಯುವಕರ ಬಗ್ಗೆ ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅವರು ವಾಪಸ್ ಬಂದ ಮೇಲೆ ಭಯೋತ್ಪಾದನೆ ನಡೆಸುವುದಿಲ್ಲ ಎಂಬುದಕ್ಕೆ ಖಾತ್ರಿ ಏನಿದೆ? ಈ ಪ್ರಸ್ತಾಪವನ್ನು ಬಿಜೆಪಿ ವಿರೋಧಿಸುತ್ತದೆ. ಒಳನುಸುಳುವಿಕೆಯನ್ನು ಹೆಚ್ಚಿಸುವ ಯಾವುದೇ ಯೋಜನೆಯನ್ನು ನಮ್ಮ ಪಕ್ಷ ಸಾರಾಸಗಟಾಗಿ ವಿರೋಧಿಸುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಜಮ್ಮು-ಕಾಶ್ಮೀರ ಸಮ್ಮಿಶ್ರ ಸರಕಾರದ ನಿಲುವಿಗೆ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬೀ ಆಜಾದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನು ಪ್ರಸ್ತಾಪಿಸಿದ ರವಿ ಶಂಕರ್ ಪ್ರಸಾದ್, 'ಅಲ್ಲಿನ ಮಾಜಿ ಮುಖ್ಯಮಂತ್ರಿ ಆಜಾದ್ ಜತೆ ಈ ಕುರಿತು ಸಮಾಲೋಚನೆ ನಡೆಸಲಾಗಿದೆಯೇ? ಇದ್ಯಾವುದೂ ಇಲ್ಲದೆ ಸಾರ್ವಜನಿಕರ ನಿಲುವುಗಳ ವಿರುದ್ಧವೂ ಅಪಾಯಕಾರಿ ನಿರ್ಧಾರಕ್ಕೆ ಬಂದಿದ್ದಾರೆ. ಆಜಾದ್ ಅವರ ಹೇಳಿಕೆ ಮಹತ್ವವಾದದ್ದು' ಎಂದರು.