'...ಖಾನ್' ಚಿತ್ರ ಬಿಡುಗಡೆಗೆ ಗಾಂಧಿ ಕುಟುಂಬದ ಕೃಪೆ ಕಾರಣ?
ಮುಂಬೈ, ಶನಿವಾರ, 13 ಫೆಬ್ರವರಿ 2010( 12:42 IST )
ಶಾರೂಖ್ ಖಾನ್ 'ಗಾಂಧಿ ಕುಟುಂಬ'ಕ್ಕೆ (ನೆಹರು) ತೀರಾ ಹತ್ತಿರದವರಾಗಿದ್ದರಿಂದ 'ಮೈ ನೇಮ್ ಈಸ್ ಖಾನ್' ಚಿತ್ರ ಬಿಡುಗಡೆ ಸರಾಗವಾಗಿ ನಡೆಯುವಂತೆ ಭಾರೀ ಭದ್ರತೆ ಒದಗಿಸಲು ರಾಜ್ಯ ಸರಕಾರದ ಒತ್ತಡ ಹೇರಲಾಗಿತ್ತು; ತಪ್ಪಿದಲ್ಲಿ ಕೇಂದ್ರವೇ ಮುಂದೆ ಬಂದು ಅರೆ ಮಿಲಿಟರಿಯನ್ನು ನಿಯೋಜಿಸುವುದಾಗಿ ಬೆದರಿಕೆ ಹಾಕಿತ್ತು ಎಂಬ ಸುದ್ದಿಗಳೀಗ ಹರಿದಾಡುತ್ತಿವೆ.
ಐಪಿಎಲ್‌ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರನ್ನು ಸೇರಿಸಿಕೊಳ್ಳಬೇಕಿತ್ತು ಎಂದು ಪರವಹಿಸಿ ಮಾತನಾಡಿದ್ದ ಶಾರೂಖ್‌ರನ್ನು 'ದೇಶದ್ರೋಹಿ' ಎಂದು ಜರೆದಿದ್ದ ಶಿವಸೇನೆ, ಅವರ ಚಿತ್ರ ಬಿಡುಗಡೆಗೆ ಮುಂಬೈಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಆರಂಭದಲ್ಲಿ ಸಿನಿಮಾ ಮಂದಿರಗಳು ಬಾಳ ಠಾಕ್ರೆಯವರ ಶಿವಸೈನಿಕರಿಗೆ ಹೆದರಿ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದವಾದರೂ, ನಂತರ ಬಹುತೇಕ ಎಲ್ಲಾ ಥಿಯೇಟರುಗಳಲ್ಲಿ ಸಿನಿಮಾ ಪ್ರದರ್ಶಿಸಲಾಯಿತು.
ಇದರ ಹಿಂದೆ ಗಾಂಧಿ ಕುಟುಂಬ, ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಶಾರೂಖ್ ಖಾನ್ ನಿರಂತರ ಶ್ರಮ ವಹಿಸಿದ್ದರು. ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದೇ ಇದ್ದರೆ ಅರೆಸೇನಾ ಪಡೆಯನ್ನು ತಾನು ನಿಯೋಜಿಸುವುದಾಗಿ ತನ್ನದೇ ಪಕ್ಷದ ನೇತೃತ್ವದ ಮಹಾರಾಷ್ಟ್ರ ರಾಜ್ಯ ಸರಕಾರಕ್ಕೆ ಕೇಂದ್ರ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆಗಳಿದ ಸರಕಾರ, ಚಿತ್ರ ಮಂದಿರಗಳ ಮಾಲಕರನ್ನು ರಾತೋರಾತ್ರಿ ಒಪ್ಪಿಸುವುದರಿಂದ ಹಿಡಿದು ಮೊದಲ ಶೋ ನೋಡುವವರೆಗೆ ಎಲ್ಲವೂ ಸುಸೂತ್ರವಾಗುವಂತೆ ನೋಡಿಕೊಂಡರು ಎಂದು ಮೂಲಗಳು ಹೇಳಿವೆ.
IFM
ಇದೇ ಹೊತ್ತಿನಲ್ಲಿ ಅತ್ತ ವಿದೇಶದಲ್ಲಿದ್ದ ಶಾರೂಖ್ ಟ್ವಿಟ್ಟರ್ ಮೂಲಕ ಅಭಿಮಾನಿಗಳನ್ನು, ಜನತೆಯನ್ನು ಸಮಾಧಾನಗೊಳಿಸಲು ಯತ್ನಿಸುತ್ತಿದ್ದರು. ನಾನು ನೀಡಿರುವ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಬಿಡಿ ಎಂದೆಲ್ಲಾ ಹೇಳುತ್ತಾ, ಮತ್ತೊಂದು ಕಡೆ ನನ್ನ ಕ್ಷಮೆ ಶಿವಸೇನೆಗಲ್ಲ ಎಂದು ಸ್ಪಷ್ಪಪಡಿಸುತ್ತಾ ಬಂದಿದ್ದರು.
ಮುಂಬೈಯಲ್ಲಿನ ಪರಿಸ್ಥಿತಿ ಕುರಿತು ನವದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈಯವರು ಸಚಿವಾಲಯದ ಹಿರಿಯರು ಹಾಗೂ ಬೇಹುಗಾರಿಕಾ ವಿಭಾಗದ ವಿಶೇಷ ಸಭೆಯನ್ನು ಕರೆದು ನಗರದ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿದ್ದರು.
ನಮಗೆ ಇದೊಂದು ಮುಜುಗರ ಉಂಟು ಮಾಡುವ ಪರಿಸ್ಥಿತಿ. ರಾಜಕೀಯ ಪಕ್ಷವೊಂದರಿಂದ ಎದುರಾದ ಪ್ರತಿರೋಧದ ಕಾರಣಕ್ಕೆ ಗೃಹ ಕಾರ್ಯದರ್ಶಿಯವರು ವಿಶೇಷ ಸಭೆ ನಡೆಸಿದ ಮೊತ್ತ ಮೊದಲನೆ ಉದಾಹರಣೆಯಿದು. ಸಾಮಾನ್ಯವಾಗಿ ಬಾಂಬ್ ಸ್ಫೋಟ ಅಥವಾ ಭಯೋತ್ಪಾದನಾ ದಾಳಿಗಳು ನಡೆದ ಸಂದರ್ಭದಲ್ಲಿ ಮಾತ್ರ ಹೀಗೆ ಸಭೆ ಕರೆಯಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾರೂಖ್ ಖಾನ್‌ರವರು ಗಾಂಧಿ ಕುಟುಂಬಕ್ಕೆ ತೀರಾ ಆಪ್ತರಾಗಿರುವ ಕಾರಣ ಚಿತ್ರ ಬಿಡುಗಡೆ ಸರಾಗವಾಗಿ ನಡೆಯಿತು ಎಂಬುದನ್ನು ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದಾರೆ.
ಸ್ವತಃ ಮುಖ್ಯಮಂತ್ರಿ ಅಶೋಕ್ ಚೌಹಾನ್‌ರವರು ನಗರದ ಪರಿಸ್ಥಿತಿಯನ್ನು ವಾರಗಳ ಮಟ್ಟಿಗೆ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಅತ್ತ ಗೃಹಸಚಿವ ಆರ್.ಆರ್. ಪಾಟೀಲ್ ಚಿತ್ರ ಪ್ರದರ್ಶಕರ ಜತೆ ಮಾತಿಗಿಳಿದಿದ್ದರು.
ಈ ಹೊತ್ತಲ್ಲಿ ಸುಮಾರು 2,500ರಷ್ಟು ಶಿವಸೈನಿಕರನ್ನು ಬಂಧಿಸಲಾಯಿತಲ್ಲದೆ, ಉದ್ಧವ್ ಠಾಕ್ರೆಗೆ ನೀಡಿದ ಭದ್ರತೆಯನ್ನು ವಾಪಸ್ ಪಡೆಯುವುದಾಗಿ ಸರಕಾರವು ಬೆದರಿಕೆಯನ್ನೂ ಹಾಕಿತು. ಅಲ್ಲದೆ ಶಿವಸೇನೆಯ ಕೆಲವು ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆಯುವ ಮೂಲಕ ಅವರ ಆತ್ಮಸ್ಥೈರ್ಯ ಕುಸಿಯುವಂತೆ ಸರಕಾರ ಮಾಡುವಲ್ಲಿ ಯಶಸ್ವಿಯಾಗಿತ್ತು.
ಗೃಹಸಚಿವರು ಸ್ವತಃ ಯಾವುದಾದರೂ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಹಾಜರಿರಬೇಕು ಎಂಬ ಷರತ್ತಿನೊಂದಿಗೆ ಚಿತ್ರ ಬಿಡುಗಡೆ ಮಾಡಲು ಥಿಯೇಟರುಗಳು ಒಪ್ಪಿಗೆ ಸೂಚಿಸಿದ್ದವು. ಚೌಹಾನ್ ಪರಿಸ್ಥಿತಿಯನ್ನು ಕೂಲಂಕಷವಾಗಿ ಗಮನಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ತನ್ನ ಗೃಹಕಚೇರಿಯಲ್ಲಿ ವ್ಯಸ್ತರಾದ ಹೊರತಾಗಿಯೂ ಚಿತ್ರ ಮಂದಿರಗಳಿಗೆ ಭೇಟಿ ನೀಡಿದ್ದರು.
ಗೃಹಸಚಿವ ಪಾಟೀಲ್ ನಾರಿಮನ್ ಪಾಯಿಂಟ್‌ನಲ್ಲಿನ ಇನೋಕ್ಸ್ ಚಿತ್ರಮಂದಿರಕ್ಕೆ 100ಕ್ಕೂ ಹೆಚ್ಚು ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ತೆರಳಿ ಸ್ವಲ್ಪ ಕಾಲ ಕಳೆದರು. ನಂತರ ಅವರು ಹಲವು ಚಿತ್ರಮಂದಿರಗಳಿಗೆ ಸ್ವತಃ ತೆರಳಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ಚಿತ್ರಪ್ರೇಮಿಗಳಿಗೆ ಮನದಟ್ಟು ಮಾಡಿದರು.
ಸರಕಾರ ಸಕಲ ನೆರವಿನೊಂದಿಗೆ ಬಾಲಿವುಡ್ ಬಾದ್‌ಶಾಹನ ಬೆಂಬಲಕ್ಕೆ ನಿಂತು ಭಾರೀ ಭದ್ರತೆ ಒದಗಿಸಿದ ಕಾರಣ ಶಿವಸೇನೆಯ ಯೋಜಿತ ಕಾರ್ಯಗಳು ನಡೆಯಲಿಲ್ಲ. ಹಾಗಾಗಿ ಶಾರೂಖ್ ಗೆದ್ದರು ಮತ್ತು ಶಿವಸೇನೆ ಸೋತಿತು ಎಂದು ಶೀರ್ಷಿಕೆಗಳು ಪತ್ರಿಕೆಗಳಲ್ಲಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೇ ರಾರಾಜಿಸತೊಡಗಿದ್ದರೆ, ಇದರ ಹಿಂದೆ ಶಾರೂಖ್-ಗಾಂಧಿ ಕುಟುಂಬದ ಆಪ್ತ ಸಂಬಂಧ ಕೆಲಸ ಮಾಡಿದೆ ಎಂದು ಇಂದು ವರದಿಗಳು ಹೇಳಿವೆ.