ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಪ್ರೇಮಿಯ ಅಭಿಮಾನಿಗಳು ಚಿತ್ರ ನೋಡಲಿ ಬಿಡಿ: ಠಾಕ್ರೆ
(Ashok Chavan | Shiv Sena | Bal Thackeray | Shah Rukh Khan)
ಪಾಕಿಸ್ತಾನಿ ಪ್ರೇಮಿ ಶಾರೂಖ್ ಖಾನ್‌ರನ್ನು ಇಷ್ಟಪಡುವವರು ಚಿತ್ರ ನೋಡಲಿ ಬಿಡಿ ಎಂದಿರುವ ಶಿವಸೇನಾ ವರಿಷ್ಠ ಬಾಳ ಠಾಕ್ರೆ, ಅಶೋಕ್ ಚೌಹಾನ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯೋ ಅಥವಾ ಬಾಲಿವುಡ್ ನಟನ ಬಾಡಿಗಾರ್ಡೋ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಶಾರೂಖ್ ಖಾನ್ ಅವರ 'ಮೈ ನೇಮ್ ಈಸ್ ಖಾನ್' ಚಿತ್ರದ ಬಿಡುಗಡೆಯನ್ನು ತಡೆಯಲು ವಿಫಲವಾದ ನಂತರ ಪ್ರತಿಕ್ರಿಯಿಸಿರುವ ಠಾಕ್ರೆ, 'ಶಾರೂಖ್ ಖಾನ್ ಅವರ ಪಾಕಿಸ್ತಾನ ಪ್ರೀತಿಯನ್ನು ಇಷ್ಟಪಡುವ ಸಿನಿಮಾ ಮಂದಿರಗಳ ಮಾಲಕರು ಚಿತ್ರ ಬಿಡುಗಡೆ ಮಾಡಲಿ ಬಿಡಿ... ಪಾಕಿಸ್ತಾನಿ ಶಕ್ತಿಗಳನ್ನು (ಖಾನ್) ಬಯಸುವವರು ಚಿತ್ರವನ್ನೂ ನೋಡಲಿ ಬಿಡಿ...' ಎಂದಿದ್ದಾರೆ.
ಶಿವಸೈನಿಕರು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾರೆ. ಅವರು ಸೋತಿಲ್ಲ. ಶಿವಸೇನೆಯ ಹೋರಾಟ ಯಶಸ್ವಿಯಾಗಿದೆ ಎಂದೂ ಠಾಕ್ರೆ ಹೇಳಿದ್ದಾರೆ.
ನಮ್ಮ ಪ್ರತಿರೋಧ 'ಮೈ ನೇಮ್ ಈಸ್ ಖಾನ್' ಚಿತ್ರದ ವಿರುದ್ಧವಲ್ಲ. ಅದರ ನಾಯಕ ಪಾಕಿಸ್ತಾನದ ಪರ ತನ್ನ ಪ್ರೀತಿಯನ್ನು ಹರಿಸಿ ಭಾರತವನ್ನು ಅವಮಾನಗೊಳಿಸಿರುವುದರ ವಿರುದ್ಧ. ಹಾಗಾಗಿ ನಾವು ಗೆದ್ದಿದ್ದೇವೆ ಎಂದು ಅವರು ಎದೆ ತಟ್ಟಿಕೊಂಡಿದ್ದಾರೆ.
ಶಾರೂಖ್ ಬಾಡಿಗಾರ್ಡ್ ಚೌಹಾನ್..! ಅದೇ ಹೊತ್ತಿಗೆ ಭಾರೀ ಭದ್ರತೆ ಒದಗಿಸಿರುವ ಮುಖ್ಯಮಂತ್ರಿ ಚೌಹಾನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಠಾಕ್ರೆ, ನೀವು ಮಹಾರಾಷ್ಟ್ರ ಮುಖ್ಯಮಂತ್ರಿಯೋ ಅಥವಾ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಅಂಗರಕ್ಷಕನೋ ಎಂದು ಪ್ರಶ್ನಿಸಿದ್ದಾರೆ.
ಅವರು ಎರಡನೇಯದ್ದನ್ನು ಆರಿಸಿಕೊಂಡಿದ್ದಾರಾದರೆ ಸೆಕ್ಯುರಿಟಿ ಗಾರ್ಡ್ ಸಮವಸ್ತ್ರ ತೊಟ್ಟು ಶಾರೂಖ್ ಅವರ 'ಮನ್ನತ್' ಬಂಗಲೆ ಹೊರಗಡೆ ನಿಂತುಕೊಂಡು ಒಳಗೆ ಹೋಗುವವರಿಗೆ ಸೆಲ್ಯೂಟ್ ಹೊಡೆಯುತ್ತಿರಲಿ ಎಂದು 'ಸಾಮ್ನಾ'ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಠಾಕ್ರೆ ಸಲಹೆ ನೀಡಿದ್ದಾರೆ.
ಕಳೆದ ಏಳೆಂಟು ದಿನಗಳಲ್ಲಿ ಚೌಹಾನ್ ಏನು ಕೆಲಸ ಮಾಡಿದ್ದಾರೆ? ಮಾಡಿದ್ದು ಕೇವಲ ಪಾಕ್ ಪ್ರೇಮಿ ಖಾನ್‌ರನ್ನು ಪರವಹಿಸಿದ್ದು ಮಾತ್ರ. ಇಡೀ ಪೊಲೀಸ್ ಇಲಾಖೆಯೇ ಖಾನ್‌ರ 'ಜೀತದಂತೆ ಮತ್ತು ಮನೆಕೆಲಸದವರಂತೆ' ಬಳಕೆಯಾಗಿದೆ ಎಂದು ಶಿವಸೈನಿಕರ ವಿರುದ್ಧ ಪೊಲೀಸರು ಕ್ರಮಕೈಗೊಂಡಿರುವುದನ್ನು ಉಲ್ಲೇಖಿಸುತ್ತಾ ಬರೆದಿದ್ದಾರೆ.
ಇನ್ನುಳಿದಿರುವುದು ಉಗ್ರ ಕಸಬ್ ಮತ್ತು ಆತನ ಸಹಚರರಾದ ಒಂಬತ್ತು ಮಂದಿ ಬಲಿಯಾದವರಿಗೆ ಮಾರ್ಬಲ್ ಸ್ಮಾರಕ ನಿರ್ಮಿಸಿ ಅದಕ್ಕೆ ಪೊಲೀಸರಿಂದ ಸೆಲ್ಯೂಟ್ ಹೊಡೆಸುವ ಕೆಲಸ ಮಾತ್ರ ಎಂದು ಸರಕಾರವನ್ನು ಕುಟುಕಿದ್ದಾರೆ.
ಅಪಾರ್ಥಗಳಿದ್ದರೆ ಸರಿಪಡಿಸುತ್ತೇನೆ: ಖಾನ್ ನನಗೆ ಬಾಳಸಾಹೇಹ್ ಮತ್ತು ಉದ್ಧವ್‌ಜೀ (ಠಾಕ್ರೆಗಳು) ಚೆನ್ನಾಗಿ ಗೊತ್ತು. ಇಲ್ಲೇನಾದರೂ ಅಪಾರ್ಥಗಳಿದ್ದರೆ ನಾನು ಅದನ್ನು ತಿಳಿಗೊಳಿಸಲಿದ್ದೇನೆ. ನನಗೆ ಯಾವುದೇ ಅಹಂಭಾವ ಅಥವಾ ಅವರ ವಿರುದ್ಧ ಅಗೌರವವಿಲ್ಲ ಎಂದು ವಿದೇಶದಲ್ಲಿರುವ ಶಾರೂಖ್ ಹೇಳಿದ್ದಾರೆ.
ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿರುವ ಖಾನ್, ಶಿವಸೇನೆ ನಾಯಕರಲ್ಲಿ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರಾದರೂ ಅವರ ಜತೆ ಮಾತುಕತೆ ನಡೆಸುವ ಉತ್ಸುಕತೆ ತೋರ್ಪಡಿಸಿದ್ದಾರೆ.