ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಂಧಮಾಲ್ ನಿವಾಸಿಗಳೇ, ವಾಪಸ್ ಬನ್ನಿ: ಒರಿಸ್ಸಾ ಜಾಹೀರಾತು
(Orissa | Kandhamal | riot-ravaged district | media advertisements)
ಕೋಮುಗಲಭೆಗೆ ತತ್ತರಿಸಿದ ಕಂಧಮಾಲ್ ಜಿಲ್ಲೆಯಿಂದ ವಲಸೆ ಹೋಗಿದ್ದ ಜನರು ಇನ್ನೂ ಪೂರ್ಣ ಪ್ರಮಾಣದಲ್ಲಿ ಮರಳಿರದ ಹಿನ್ನೆಲೆಯಲ್ಲಿ ಸರಕಾರ ಜಾಹೀರಾತು ನೀಡಿ, 'ಸಂಪೂರ್ಣ ರಕ್ಷಣೆ ನೀಡುತ್ತೇವೆ, ದಯವಿಟ್ಟು ಕಂಧಮಾಲ್‌ಗೆ ವಾಪಸ್ ಬನ್ನಿ' ಎಂದು ಮನವಿ ಮಾಡಲಿದೆ.
ಕಂಧಮಾಲ್‌ನಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು, ಜನತೆ ತಮ್ಮ ಹಳ್ಳಿಗಳಿಗೆ ಮರಳುವಂತೆ ಮಾಧ್ಯಮಗಳ ಮೂಲಕ ನಾವು ಮನವಿ ಮಾಡಿಕೊಳ್ಳಲಿದ್ದೇವೆ. ಕಳೆದ 15 ತಿಂಗಳುಗಳಲ್ಲಿ ಈ ಜಿಲ್ಲೆಯಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆದಿಲ್ಲ ಎಂದು ಕಂಧಮಾಲ್ ಜಿಲ್ಲೆಯ ವಿಶೇಷ ಆಡಳಿತಾಧಿಕಾರಿ ಎಂ.ಎಸ್. ಪಾಧಿ ತಿಳಿಸಿದ್ದಾರೆ.
ಸಂತ್ರಸ್ತರಿಗೆ ಸಂಪೂರ್ಣ ರಕ್ಷಣೆ ನೀಡುವ ಭರವಸೆಯನ್ನು ಸರಕಾರವು ಕಂಧಮಾಲ್ ಆಡಳಿತದ ಮೂಲಕ ನೀಡುತ್ತಿದೆ. ಏನಾದರೂ ದೂರುಗಳಿದ್ದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಚಿತ ಕರೆ ಮಾಡಬಹುದಾದ ದೂರವಾಣಿಯನ್ನೂ ಸ್ಥಾಪಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
2008ರ ಹಿಂಸಾಚಾರ ಸಂದರ್ಭದಲ್ಲಿ ಭೀತಿಯಿಂದ ಕೇರಳಕ್ಕೆ ವಲಸೆ ಹೋಗಿದ್ದ ಸುಮಾರು 30 ಕುಟುಂಬಗಳನ್ನು ಈಗಾಗಲೇ ಸರಕಾರ ಕಂಧಮಾಲ್‌ಗೆ ವಾಪಸ್ ಕರೆ ತಂದಿದೆ. ಇಲ್ಲಿಗೆ ಮರಳುವ ಎಲ್ಲಾ ನಿವಾಸಿಗಳ ಸಂಪೂರ್ಣ ಸುರಕ್ಷತೆಯ ಭರವಸೆ ನೀಡುತ್ತಿದ್ದೇವೆ ಮತ್ತು ಅದಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ನಾವು ತೆಗೆದುಕೊಳ್ಳುತ್ತೇವೆ ಎಂದು ಪಾಧಿ ತಿಳಿಸಿದರು.
ಇಲ್ಲಿ ಮತ್ತೆ ಕೋಮುಗಲಭೆ ಕಾಣಿಸಿಕೊಳ್ಳಬಹುದು ಎಂಬ ಹೆದರಿಕೆಯಿಂದ ವಾಪಸಾಗಲು ಜನ ಹೆದರುತ್ತಿದ್ದಾರೆ ಎಂದು ಕಂಧಮಾಲ್‌ಗೆ ಭೇಟಿ ನೀಡಿದ್ದ ಯೂರೋಪಿಯನ್ ಯೂನಿಯನ್ ರಾಜತಾಂತ್ರಿಕರು ಮತ್ತು ಚರ್ಚ್ ಮುಖಂಡರು ಆರೋಪಿಸಿದ ನಂತರ ಸರಕಾರವು ಈ ಪ್ರತಿಕ್ರಿಯೆ ನೀಡಿದೆ.
ಆಂಧ್ರಪ್ರದೇಶ, ಕೇರಳ ಮತ್ತು ಪಂಜಾಬ್‌ಗಳಿಗೆ ವಲಸೆ ಹೋಗಿರುವುದರ ಜತೆಗೆ ಒರಿಸ್ಸಾದ ಹಲವು ನಗರಗಳಲ್ಲೂ ಕಂಧಮಾಲ್ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ ಎಂದು ಇಲ್ಲಿನ ಆರ್ಚ್‌ಬಿಷಪ್ ರಾಫೆಲ್ ಚೀನಾಥ್ ಹೇಳಿದ್ದಾರೆ.
ಹಿಂಸಾಚಾರದ ಕಾರಣದಿಂದ ಸುಮಾರು 11,000 ಕುಟುಂಬಗಳು ಇಲ್ಲಿಂದ ವಲಸೆ ಹೋಗಿವೆ. 1,200ಕ್ಕೂ ಹೆಚ್ಚು ಕುಟುಂಬಗಳು ಶಾಶ್ವತವಾಗಿ ವಲಸೆ ಹೋಗಿವೆ. ಅವು ಮತ್ತೆ ಕಂಧಮಾಲ್‌ಗೆ ಮರಳುವ ಇಚ್ಛೆ ಹೊಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.