ಚುನಾವಣೆಗಳಲ್ಲಿ ನಿರಂತರ ಹಿನ್ನಡೆ ಅನುಭವಿಸಿದ ಬಳಿಕ ಬಿಜೆಪಿಯ ಪ್ರಮುಖ ಹುದ್ದೆಗಳನ್ನು ತ್ಯಜಿಸಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ರಾಜನಾಥ್ ಸಿಂಗ್ ಇದೀಗ ಸಂಸತ್ತಿನ ಕೆಳಮನೆಯಲ್ಲಿ ಸೀಟುಗಳನ್ನು ಬದಲಾವಣೆ ಮಾಡಿಕೊಳ್ಳಲಿದ್ದಾರೆ.
ಡಿಸೆಂಬರ್ 18ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸುಷ್ಮಾ ಸ್ವರಾಜ್ ಅವರಿಗೆ ಹಸ್ತಾಂತರಿಸಿದ್ದ ಅಡ್ವಾಣಿಯವರು ಬಿಜೆಪಿಯ ಮೊತ್ತ ಮೊದಲ 'ಸಂಸದೀಯ ಪಕ್ಷ'ದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅದಕ್ಕೂ ಮೊದಲು ಸುಷ್ಮಾ ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕಿಯಾಗಿದ್ದರು.
ವಿರೋಧ ಪಕ್ಷದ ನಾಯಕನ ಅಧಿಕಾರವನ್ನು ಸುಷ್ಮಾಗೆ ಕೊಟ್ಟಿದ್ದ ಅಡ್ವಾಣಿ ಇದೀಗ ಲೋಕಸಭೆಯಲ್ಲಿನ ಖುರ್ಚಿಯನ್ನೂ ಬಿಟ್ಟುಕೊಡಬೇಕಾಗಿದೆ. ಫೆಬ್ರವರಿ 22ರಿಂದ ಆರಂಭವಾಗಲಿರುವ ಸಂಸತ್ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ಬದಲಾವಣೆ ನಡೆಯಲಿದೆ.
ಅಗತ್ಯ ಸ್ಥಾನಪಲ್ಲಟ ಮಾಡಲಾಗಿದೆ. ಲೋಕಸಭೆಯಲ್ಲಿ ನಿಗದಿಯಾಗಿರುವ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬಿಜೆಪಿಯೊಳಗೆ ಅದಲು ಬದಲು ಮಾಡಲಾಗುತ್ತದೆ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ.
ಆದರೆ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿದ್ದ ಅಡ್ವಾಣಿಯವರು ಮೊದಲ ಸಾಲಿನಲ್ಲಿಯೇ ಮುಂದುವರಿಯಲಿದ್ದಾರೆ. ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಬಳಸುತ್ತಿದ್ದ ಸ್ಥಾನಕ್ಕೆ ಅಡ್ವಾಣಿಯವರು ಬರಲಿದ್ದು, ರಾಜನಾಥ್ ಎರಡನೇ ಸಾಲಿಗೆ ಸ್ಥಳಾಂತರಗೊಳ್ಳಲಿದ್ದಾರೆ.
ಲೋಕಸಭೆಯ ಉಪನಾಯಕ ಗೋಪಿನಾಥ ಮುಂಡೆಯವರು ಮುಂದಿನ ಸಾಲಿಗೆ ಬಡ್ತಿ ಹೊಂದಲಿದ್ದಾರೆ. ಪ್ರಸಕ್ತ ಅವರು ಎರಡನೇ ಸಾಲಿನಲ್ಲೇ ಕುಳಿತುಕೊಳ್ಳುತ್ತಿದ್ದಾರೆ.
ಬಿಜೆಪಿಯ ಉಚ್ಛಾಟಿತ ನಾಯಕ ಜಸ್ವಂತ್ ಸಿಂಗ್ ಸಂಸತ್ತಿನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ತನ್ನ ಮೊದಲ ಸಾಲಿನ ಸೀಟನ್ನು ಕಳೆದುಕೊಂಡಿದ್ದರು. ಅಲ್ಲದೆ ಮೂರನೇ ಸಾಲಿಗೆ ತಳ್ಳಲ್ಪಟ್ಟಿದ್ದರು.
71ರ ಸಿಂಗ್ ಅವರಿಗೆ ಸಂಸತ್ತಿನ ಕೆಳಮನೆಯಲ್ಲಿ ಸಣ್ಣ ಪಕ್ಷಗಳಿಗೆ ನೀಡಲಾಗುವ ಐದನೇ ಬ್ಲಾಕಿನ ಸಮೀಪದ ಮೂರನೇ ಸಾಲಿನಲ್ಲಿರುವ 371ನೇ ಸೀಟನ್ನು ನೀಡಲಾಗಿದೆ.