ನಗರದ ಜರ್ಮನ್ ಬೇಕರಿಯಲ್ಲಿ ನಿನ್ನೆ ನಡೆದ ಬಾಂಬ್‌ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿ 57 ಮಂದಿ ಗಾಯಗೊಂಡ ಘಟನೆಯಲ್ಲಿ ಗುಪ್ತಚರ ದಳಗಳ ವೈಫಲ್ಯವಿಲ್ಲ. ಆದರೆ ಮತ್ತಷ್ಟು ಏಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಚಿದಂಬರಂ, ವಿದೇಶಿಯರು ಹಾಗೂ ಭಾರತೀಯರು ಪದೇ ಪದೇ ಭೇಟಿ ನೀಡುವ ಜರ್ಮನ್ ಬೇಕರಿಯಂತಹ ಸ್ಥಳಗಳು ಉಗ್ರರ ಗುರಿಯಾಗಿವೆ ಎಂದು ಹೇಳಿದ್ದಾರೆ.
ಲಷ್ಕರ್-ಏ-ತೊಯಿಬಾ ಶಂಕಿತ ಉಗ್ರ ಡೇವಿಡ್ ಹ್ಯಾಡ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಜರ್ಮನ್ ಬೇಕರಿಗೆ ಹತ್ತಿರವಿರುವ ಓಶೋ ಆಶ್ರಮ ಹಾಗೂ ಚಾಬಾದ್ ಹೌಸ್ ಸ್ಥಳಗಳ ಸಮೀಕ್ಷೆಯನ್ನು ನಡೆಸಿದ್ದು, ಕೆಲ ತಿಂಗಳುಗಳಿಂದ ಕೋರೆಗಾಂವ್ ಪಾರ್ಕ್ ಉಗ್ರರ ಹಿಟ್‌ಲಿಸ್ಟ್‌ನಲ್ಲಿತ್ತು ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.
ಜರ್ಮನ್ ಬೇಕರಿಯಂತಹ ಸ್ಥಳಗಳಿಗೆ ಹೆಚ್ಚಿನ ಭಧ್ರತೆಗಳಿಲ್ಲವಾದ್ದರಿಂದ, ಅಂತಹ ಸ್ಥಳಗಳನ್ನು ಉಗ್ರರ ಆಯ್ಕೆ ಮಾಡಿಕೊಳ್ಳುತ್ತಾರೆ.ಇಂತಹ ಸ್ಥಳಗಳಲ್ಲಿ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸುವುದು ಕಷ್ಟವಾಗುತ್ತದೆ ಎಂದರು.
ಸುಮಾರು 60 ಲಕ್ಷ ಜನಸಾಂದ್ರತೆ ಹೊಂದಿರುವ ನಗರಗಳಲ್ಲಿ, ನಗರಕ್ಕೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲು ಸಾಧ್ಯವಿಲ್ಲ.ಅಪರಿಚಿತ ಬ್ಯಾಗ್ ಅಥವಾ ವಸ್ತುಗಳನ್ನು ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗೃಹ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.