ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಫೋಟ: ಸರಕಾರ ಏನು ಮಾಡುತ್ತಿದೆ:ಪ್ರತಿಪಕ್ಷಗಳ ತರಾಟೆ (Indo pak talks | Foreign Secretary level | Talks | Terror , Pune)
ಪುಣೆಯ ಕೋರೆಗಾಂವ್ ಪ್ರದೇಶದಲ್ಲಿರುವ ಜರ್ಮನ್ ಬೇಕರಿಯಲ್ಲಿ ನಡೆದ ಬಾಂಬ್‌ಸ್ಫೋಟಕ್ಕೆ ಭಧ್ರತಾ ವೈಫಲ್ಯ ಕಾರಣವಾಗಿದೆ. ಮುಂಬೈಸ್ಫೋಟದ ನಂತರವೂ ಭಧ್ರತೆ ನೀಡಲಾಗದ ಕೇಂದ್ರ ಸರಕಾರ ಏನು ಮಾಡುತ್ತಿದೆ ಎಂದು ಸಿಪಿಐ ನಾಯಕ ಸೀತಾರಾಂ ಯಚೂರಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗುತ್ತಿರುವ ಕೇಂದ್ರ ಸರಕಾರ, ಮಾತುಕತೆ ನಿರ್ಧಾರವನ್ನು ಪುನರ್‌ಪರಿಶೀಲಿಸುವುದು ಸೂಕ್ತ. ಭಯೋತ್ಪಾದನೆ ಹಾಗೂ ಮಾತುಕತೆ ಏಕಕಾಲದಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಸಿಪಿಐ ಪಕ್ಷ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಭಾರತ ನಿರಂತರ ಉಗ್ರರ ಬೆದರಿಕೆ ಎದುರಿಸುತ್ತಿರುವಾಗ, ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಮುಂದುವರಿಸುವುದು ಯಾವ ಪುರುಷಾರ್ಥಕ್ಕೆ ಎಂದು ಪಕ್ಷದ ವಕ್ತಾರ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.
ಸರಕಾರ ಪಾಕ್ ಆಕ್ರಮಿತ ಕಾಶ್ಮಿರಿಗಳನ್ನು ದೇಶಕ್ಕೆ ಮರಳುವಂತೆ ನೀಡಿದ ಕರೆ ಹಾಗೂ ಪಾಕಿಸ್ತಾನದೊಂದಿಗೆ ಮಾತುಕತೆಯಂತಹ ಘೋಷಣೆಗಳ ಬಗ್ಗೆ ಗಂಭೀರವಾಗಿ ಪುನರ್‌ಪರಿಶೀಲಿಸುವುದು ಸೂಕ್ತ ಎಂದು ಬಿಜೆಪಿ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಭಾರತದಲ್ಲಿ ಆಂತರಿಕ ಭದ್ರತೆ ಹೆಚ್ಚಿಸಲಾಗಿದೆ, ಇನ್ನು ಪಾಕಿಸ್ತಾನದ ಜೊತೆಗೆ ಮಾತುಕತೆಗೆ ನಾವು ಸಿದ್ಧ ಎಂದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪ್ರಕಟಿಸಿರುವ ಬೆನ್ನಿಗೇ, 26/11ರ ಬಳಿಕ ಪುಣೆಯಲ್ಲಿ ಮತ್ತೆ ಉಗ್ರಗಾಮಿಗಳು ವಿಕಟಾಟ್ಟಹಾಸಗೈದಿದ್ದು, ಬಾಂಬ್ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿ, 57 ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಸಂಜೆ ಆರಂಭದಲ್ಲಿ ಇದೊಂದು ಸಿಲಿಂಡರ್ ಸ್ಫೋಟ ಪ್ರಕರಣ ಎಂದೇ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದರೆ, ಸಂಜೆ 7.30ರ ವೇಳೆಗೆ ಪುಣೆಯ ಕೋರೆಗಾಂವ್ ಪಾರ್ಕ್ ಬಳಿಯ, ಓಶೋ ಆಶ್ರಮದ ಸಮೀಪ ಇರುವ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟದಲ್ಲಿ ಸುಧಾರಿತ ಸ್ಫೋಟಕ ಸಧನ (ಐಇಡಿ) ಬಳಸಲಾಗಿದೆ ಮತ್ತು ಆದಕ್ಕೆ ಆರ್‌ಡಿಎಕ್ಸ್ ಕೂಡ ಮಿಶ್ರ ಮಾಡಲಾಗಿತ್ತು ಎಂದು ಆರಂಭಿಕ ತನಿಖೆಗಳು ತಿಳಿಸಿವೆ.
ಗೃಹ ಸಚಿವ ಪಿ.ಚಿದಂಬರಂ ಅವರು ಭಾನುವಾರ ಮುಂಜಾನೆಯೇ ಪುಣೆಗೆ ಧಾವಿಸಿ, ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾಗಿದ್ದಾರೆ.
ಈ ಬೇಕರಿಗೆ ವಿದೇಶೀಯರೇ ಹೆಚ್ಚು ಬರುತ್ತಿರುವುದರಿಂದ ಉಗ್ರಗಾಮಿಗಳು ಇದೇ ಕಾರಣಕ್ಕೆ ಈ ಬೇಕರಿಯನ್ನು ಸ್ಫೋಟಕ್ಕೆ ಆಯ್ದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ನಾಲ್ಕು ಮಂದಿ ವಿದೇಶೀಯರಾಗಿದ್ದಾರೆ.
ಇದರೊಂದಿಗೆ, ಬನ್ನಿ, ಮಾತುಕತೆ ಮಾಡೋಣ ಎಂಬ ಭಾರತದ ಆಹ್ವಾನಕ್ಕೆ ಪಾಕಿಸ್ತಾನವೂ, 'ನಾವೇನೂ ಭಾರತದೆದುರು ಮಂಡಿಯೂರಿ ವಿನಂತಿಸಿರಲಿಲ್ಲ. ಅದುವೇ ಮಾತುಕತೆಗೆ ಆಹ್ವಾನಿಸುತ್ತಿದೆ' ಎಂದು ಮೀಸೆ ತಿರುವಿಕೊಂಡಿದ್ದ ಪಾಕಿಸ್ತಾನವು ಸಮ್ಮತಿಸಿದ್ದು, ಫೆ.25ರ ದಿನಾಂಕವನ್ನು ಈ ಮಾತುಕತೆಗಾಗಿ ನಿಗದಿಪಡಿಸಲಾಗಿತ್ತು.
ಪಾಕಿಸ್ತಾನಿ ಮೂಲದ ಕುಖ್ಯಾತ ಉಗ್ರಗಾಮಿ, ಇದೀಗ ಅಮೆರಿಕ ಪೊಲೀಸರ ಸೆರೆಯಲ್ಲಿರುವ, ಪಾಕಿಸ್ತಾನಿ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೋಯಿಬಾದ ಡೇವಿಡ್ ಹೆಡ್ಲಿ ಭಾರತಕ್ಕೆ ಆಗಾಗ್ಗೆ ಭೇಟಿ ನೀಡಿದ್ದಾಗ, ಈ ಆಶ್ರಮದ ಪರಿಸರವನ್ನೂ ತಪಾಸಣೆ ನಡೆಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಲ್ಲದೆ, ಈ ಸ್ಫೋಟದ ಹಿಂದೆ ಲಷ್ಕರ್‌ನಿಂದ ಪ್ರೇರಣೆ ಪಡೆದಿರುವ ಇಂಡಿಯನ್ ಮುಜಾಹಿದೀನ್‌ಗಳ ಕೈವಾಡವಿದೆ ಎಂದೂ ಮೂಲಗಳು ಶಂಕಿಸಿವೆ.
ಸ್ಫೋಟದಲ್ಲಿ ನಾಲ್ಕು ಅಂಗಡಿಗಳು ಹಾನಿಗೀಡಾಗಿವೆ. ಓಶೋ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೆಡ್ಲಿಯು ಉಳಿದುಕೊಂಡಿದ್ದ ಹೋಟೆಲ್‌ಗೆ ಸಮೀಪದಲ್ಲೇ ಇದೆ ಈ ಬೇಕರಿ.