ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದಕರು ಎಚ್ಚರಿಸಿದ್ದರು, ಭಾರತ ಲೆಕ್ಕಿಸಿರಲಿಲ್ಲ ಅಷ್ಟೇ..! (Pune blast | Indo-Pak talks | Pakistan | terrorism)
Bookmark and Share Feedback Print
 
ಭಾರತದ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಬೇಹುಗಾರಿಕಾ ಇಲಾಖೆ ಸತತ ಮಾಹಿತಿಗಳನ್ನು ರವಾನಿಸುತ್ತಿತ್ತು ಮತ್ತು ಈ ಕುರಿತು ಆಗಾಗ ಭಾರತದ ಗುಪ್ತಚರ ದಳವೂ ಜಾಗೃತ ಸ್ಥಿತಿ ಘೋಷಿಸಿತ್ತು. ಸ್ವತಃ ಉಗ್ರರೇ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಕಾಂಗ್ರೆಸ್ ನೇತೃತ್ವದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ವರದಿಗಳು ಬಂದಿವೆ.

ಪುಣೆಯಲ್ಲಿ ಶನಿವಾರ ದಾಳಿ ನಡೆದ ವಾರದ ಮೊದಲು ಪಾಕಿಸ್ತಾನದ ರಾಜಧಾನಿಯಲ್ಲಿ ಸಭೆ ನಡೆಸಿದ್ದ ಭಯೋತ್ಪಾದಕರು, ತಮ್ಮ ಗುರಿಗಳಲ್ಲಿ ಪುಣೆ ಕೂಡ ಒಂದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರು.
PTI


ಫೆಬ್ರವರಿ ಐದರಂದು ಇಸ್ಲಾಮಾಬಾದ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾದ ಹೊಸ ರೂಪ 'ಜಮಾತ್ ಉದ್ ದಾವಾ' ನಡೆಸಿದ ಸಭೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿತ್ತು.

ಜಮಾತ್ ಉದ್ ದಾವಾದ ಮುಖ್ಯಸ್ಥ ಹಫೀಜ್ ಸಯೀದ್ ನಂತರದ ಸ್ಥಾನದಲ್ಲಿರುವ ಅಬ್ದುರ್ ರೆಹಮಾನ್ ಮಕ್ಕಿ ರ‌್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, 'ಜಿಹಾದಿಗಳು ಕೇವಲ ಕಾಶ್ಮೀರಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಆಸಕ್ತರಾಗಿದ್ದರು. ಆದರೆ ಆ ದೇಶದ ಜತೆಗಿನ ಜಲವಿವಾದದಿಂದಾಗಿ ದೆಹಲಿ, ಪುಣೆ ಮತ್ತು ಕಾನ್ಪುರಗಳು ಕೂಡ ನಮ್ಮ ದಾಳಿಯ ಗುರಿಗಳಾಗಿವೆ' ಎಂದಿದ್ದ.

ಆತನ ಭಾಷಣದ ವರದಿಗಳು ಭಾರತದ 'ದಿ ಹಿಂದೂ' ಸಹಿತ ಬಹುತೇಕ ಪತ್ರಿಕೆಗಳಲ್ಲಿ ಬಂದಿದ್ದವು. ಈ ವರದಿಗಳನ್ನು ಕೇಂದ್ರ ಸರಕಾರ ಉಪೇಕ್ಷಿಸಿತ್ತೇ ಎಂಬ ಪ್ರಶ್ನೆಗಳನ್ನು ಈಗ ವಿರೋಧ ಪಕ್ಷಗಳು ಎತ್ತುತ್ತಿವೆ.

ಹೆಡ್ಲಿ ನೀಡಿದ್ದ ಸುಳಿವನ್ನೂ ನಿರ್ಲಕ್ಷಿಸಲಾಯಿತೇ?
2008ರ ಮುಂಬೈ ಹತ್ಯಾಕಾಂಡಕ್ಕೂ ಮೊದಲು ಭಾರತಕ್ಕೆ ಹಲವಾರು ಸುತ್ತು ಹಾಕಿದ್ದ ಪ್ರಸಕ್ತ ಅಮೆರಿಕಾ ಬಂಧನದಲ್ಲಿರುವ ಪಾಕಿಸ್ತಾನಿ ಮೂಲದ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸೈಯದ್ ಗಿಲಾನಿ, ಪುಣೆಗೂ ಭೇಟಿ ನೀಡಿದ್ದ ಎಂಬ ವಿಚಾರ ಆತ ವಿಚಾರಣೆ ವೇಳೆ ಹೇಳಿದ್ದ. ಈ ಮಾಹಿತಿಯನ್ನು ಅಮೆರಿಕಾವು ಭಾರತಕ್ಕೆ ರವಾನಿಸಿತ್ತು.

ಮುಂಬೈ ದಾಳಿಗೂ ಮೊದಲು ಲಷ್ಕರ್ ಇ ತೋಯ್ಬಾ ದಾಳಿಗೆ ಮತ್ತಷ್ಟು ಸ್ಥಳಗಳನ್ನು ಹುಡುಕುತ್ತಿದ್ದ ಹೆಡ್ಲಿ ಪುಣೆಯ ಓಶೋ ಆಶ್ರಮದ ಸುತ್ತ ಠಳಾಯಿಸಿದ್ದ. ಇಲ್ಲಿಂದ ಕೇವಲ 300 ಅಡಿ ದೂರದಲ್ಲಷ್ಟೇ ಇದೆ ಶನಿವಾರ ದುಷ್ಕೃತ್ಯ ನಡೆದ ಜರ್ಮನ್ ಬೇಕರಿ. ಈ ಕುರಿತು ಮಾಹಿತಿ ಬಂದ ನಂತರ ಕೇಂದ್ರವು ಎಚ್ಚರಿಕೆಯನ್ನು ರವಾನಿಸಿತ್ತು ಎಂದು ಇದೀಗ ಹೇಳಿಕೆ ನೀಡುತ್ತಿದೆ.

ಜರ್ಮನ್ ಬೇಕರಿಗೆ ವಿದೇಶೀಯರೇ ಹೆಚ್ಚು ಭೇಟಿ ನೀಡುತ್ತಾರೆ ಮತ್ತು ವಿದೇಶೀಯರೇ ಉಗ್ರರ ಮೊದಲ ಗುರಿ ಎಂಬುದು ಭದ್ರತಾ ಪಡೆಗಳಿಗೆ ತಿಳಿದಿರಲಿಲ್ಲವೇ ಎಂಬ ಪ್ರಶ್ನೆಯೂ ಇಲ್ಲೇ ಉದ್ಭವಿಸುತ್ತದೆ.

ಉಗ್ರನಿಗೆ ಪುಣೆ ವೀಡಿಯೋ ತೋರಿಸಲಾಗಿತ್ತು...
ಲಷ್ಕರ್ ಇ ತೋಯ್ಬಾ ಸಂಘಟನೆಯು 'ಇಂಡಿಯನ್ ಮುಜಾಹಿದೀನ್' ಮೂಲಕ ನಡೆಸುವ ಕರಾಚಿ ಪ್ರೊಜೆಕ್ಟ್ ಎಂಬ ಭಯೋತ್ಪಾದನಾ ಕಾರ್ಯಕ್ರಮದಲ್ಲೂ ಪುಣೆಯನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಇತ್ತೀಚೆಗಷ್ಟೇ ಬಂಧಿತನಾಗಿದ್ದ ಉಗ್ರ ಮೊಹಮ್ಮದ್ ಅಹ್ಮದ್ ಖ್ವಾಜಾ ತನಿಖಾ ದಳಕ್ಕೆ ಹೇಳಿದ್ದ.

ತನಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಹಚರರು ಪುಣೆಯ ಓಶೋ ಆಶ್ರಮ ಮತ್ತು ಮುಂಬೈಯ ಸೈನಾಗೋಗ್‌ನಲ್ಲಿನ ವೀಡಿಯೋಗಳನ್ನು ತೋರಿಸಲಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದ.

ಸೆರೆ ಸಿಕ್ಕ ಭಯೋತ್ಪಾದಕರು, ಸ್ವತಃ ಉಗ್ರರೇ ಸಭೆಯಲ್ಲಿ ನೀಡಿದ್ದ ಎಚ್ಚರಿಕೆಗಳು, ಹೆಡ್ಲಿ ಭೇಟಿದ್ದ ಮಾಹಿತಿ, ಅಮೆರಿಕಾ ಸತತ ರವಾನಿಸುತ್ತಿದ್ದ ಎಚ್ಚರಿಕೆಗಳಿದ್ದ ಹೊರತಾಗಿಯೂ ಭಾರತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ವರದಿಗಳನ್ನು ಗೃಹಸಚಿವ ಪಿ. ಚಿದಂಬರಂ ತಳ್ಳಿ ಹಾಕಿದ್ದಾರೆ.

ಅವರ ಪ್ರಕಾರ ಇವೆಲ್ಲ (ಪುಣೆಯ ಜರ್ಮನ್ ಬೇಕರಿ) ಸುಲಭದಲ್ಲಿ ದಾಳಿಗೆ ತುತ್ತಾಗುವ ಪ್ರದೇಶಗಳು. ಸರಕಾರ ಎಲ್ಲಾ ಕಡೆ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಅಥವಾ ಭದ್ರತೆ ನೀಡಲು ಸಾಧ್ಯವಿಲ್ಲ. ನೆನಪಿಡಿ, ಭಯೋತ್ಪಾದಕರು ಮುಂಬೈಯಂತೆ ಸಶಸ್ತ್ರಧಾರಿಗಳಾಗಿ ಇಲ್ಲಿ ದಾಳಿ ನಡೆಸಿಲ್ಲ. ದಯವಿಟ್ಟು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವ ಪ್ರಯತ್ನ ಮಾಡಬೇಡಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ