ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಸಿಲ್ದಾ ಪ್ರದೇಶದಲ್ಲಿರುವ ಸೇನಾ ಶಿಬಿರಗಳ ಮೇಲೆ ಮಾವೋವಾದಿ ಉಗ್ರರು ದಾಳಿ ನಡೆದ 24ಮಂದಿ ಭಧ್ರತಾ ಪಡೆ ಸಿಬ್ಬಂದಿಗಳನ್ನು ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಕನಿಷ್ಠ 50 ಮಾವೋವಾದಿಗಳು 25 ಮೋಟಾರ್‌ಬೈಕ್‌ಗಳ ಮೇಲೆ ಬಂದು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಕನಿಷ್ಠ 24 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ನಿಗಮ್ ತಿಳಿಸಿದ್ದಾರೆ.
ಮಾವೋವಾದಿಗಳು ದಾಳಿ ನಡೆಸಿದ ಸಂದರ್ಭದಲ್ಲಿ 51 ಸೈನಿಕರು ಹಾಗೂ ಅಧಿಕಾರಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು. ಮಾವೋವಾದಿಗಳು ಶಿಬಿರಕ್ಕೆ ಸಾಗುವ ಮಾರ್ಗದಲ್ಲಿ ನೆಲಬಾಂಬ್‌ಗಳನ್ನು ಹುದುಗಿಸಿಟ್ಟದ್ದರು ಎಂದು ಕಾನೂನು ಮತ್ತು ಸುವ್ಯವಸ್ಥೆಯ ಐಜಿಪಿ ಎಸ್.ಪುರಕಾಯಸ್ತಾ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ದಾಳಿಯಲ್ಲಿ 9 ಸೈನಿಕರು ಸಜೀವ ದಹನವಾಗಿದ್ದು, ಐದು ಮಂದಿ ಗುಂಡಿಗೆ ಬಲಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಸಂಪೂರ್ಣ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ರಾತ್ರಿ ಧರ್ಮಾಪುರ್ ಜಿಲ್ಲೆಯಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ 40 ಜನರ ಮಾವೋವಾದಿಗಳ ತಂಡ ದಾಳಿ ನಡೆಸಿದಾಗ ಭಧ್ರತಾಪಡೆಗಳ ಮತ್ತು ಮಾವೋವಾದಿ ಗುಂಪಿನ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎಂದು ಐಜಿಪಿ ಎಸ್.ಪುರಕಾಯಸ್ತಾ ತಿಳಿಸಿದ್ದಾರೆ.