ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆಯಲ್ಲಿ ಆರ್‌ಡಿಎಕ್ಸ್ ಬಳಕೆ; ಬಲಿ ಸಂಖ್ಯೆ 10ಕ್ಕೆ (Pune Blast | German Bakery | Pakistan | Indian Mujahideen | Terror)
Bookmark and Share Feedback Print
 
ಶನಿವಾರ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹಾರಾಷ್ಟ್ರದಿಂದ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದು, ಸ್ಫೋಟಕ್ಕೆ ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಬಳಸಿರುವುದು ಫೋರೆನ್ಸಿಕ್ ವರದಿಯಿಂದ ದೃಢಪಟ್ಟಿದೆ. ಈ ಮಧ್ಯೆ, 24ರ ಯುವಕ ಅಭಿಷೇಕ್ ಸಕ್ಸೇನಾ ಎಂಬ ಗಾಯಾಳು ಮಂಗಳವಾರ ಮೃತಪಟ್ಟಿರುವುದರೊಂದಿಗೆ ಸ್ಫೋಟದಲ್ಲಿ ಸತ್ತವರ ಸಂಖ್ಯೆ ಹತ್ತಕ್ಕೇರಿತು.

ಫೋರೆನ್ಸಿಕ್ ವರದಿಗಳು ಮಂಗಳವಾರ ಪೊಲೀಸರ ಕೈ ಸೇರಿದ್ದು, ಸ್ಫೋಟದಲ್ಲಿ ಆರ್‌ಡಿಎಕ್ಸ್, ಅಮೋನಿಯಂ ನೈಟ್ರೇಟ್ ಜೊತೆಗೆ ಪೆಟ್ರೋಲಿಯಂ ಬಳಸಿರುವುದು ದೃಢಪಟ್ಟಿದೆ.

ಸಿಸಿ ಟಿವಿ ಫೂಟೇಜ್‌ನಿಂದಲೂ ಮಹತ್ವದ ಮಾಹಿತಿ ಲಭ್ಯವಾಗಿದ್ದು, ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗದು ಎಂದು ಪುಣೆ ಪೊಲೀಸ್ ಕಮಿಶನರ್ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

"ಒಳಗಿನ ಶತ್ರುಗಳು" ಇಂಡಿಯನ್ ಮುಜಾಹಿದೀನ್ ಮತ್ತು ಅದರ ಪೋಷಕ ಸಂಘಟನೆ ಪಾಕಿಸ್ತಾನದ ಲಷ್ಕರ್ ಇ ತೋಯ್ಬಾದ ಪಾತ್ರಗಳು ಖಚಿತವಾಗುತ್ತಿದ್ದು, ಈ ದಾಳಿಯನ್ನು ಪಾಕಿಸ್ತಾನದಲ್ಲೇ ಯೋಜಿಸಲಾಗಿತ್ತು ಎಂದು ಗೃಹ ಸಚಿವಾಲಯವೂ ಸ್ಪಷ್ಟಪಡಿಸಿರುವುದರೊಂದಿಗೆ, ಪಾಕ್ ಜೊತೆ ಶಾಂತಿ ಮಂತ್ರ ಪಠಿಸುತ್ತಿರುವ, "ಭಯೋತ್ಪಾದನೆ ನಿಲ್ಲಿಸಿದ ಬಳಿಕವಷ್ಟೇ ಮಾತುಕತೆ" ಎಂಬ ತನ್ನ ನಿಲುವು ಸಡಿಲಿಸಿದ ಯುಪಿಎ ಸರಕಾರವು ಇದೀಗ ಗೊಂದಲದಲ್ಲಿ ಸಿಲುಕಿದಂತಾಗಿದೆ.

10 ಜನರ ಸಾವಿಗೆ ಕಾರಣವಾದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್ ಸ್ಥಾಪಕರಲ್ಲೊಬ್ಬ ಮತ್ತು ಪುಣೆಯಲ್ಲಿ ಇದರ ಪ್ರಮುಖನಾಗಿರುವ ಮೊಹ್ಸಿನ್ ಹಬೀಬ್ ಚೌಧುರಿಯ ಮೇಲಿನ ಶಂಕೆ ಮತ್ತಷ್ಟು ಬಲವಾಗಿದೆ. ಇದೀಗ ಪಾಕಿಸ್ತಾನದಲ್ಲಿದ್ದಾರೆ ಎಂದು ಶಂಕಿಸಲಾಗಿರುವ, ಭಾರತದ ಅನ್ನ ತಿಂದು ಭಾರತಕ್ಕೇ ಸವಾಲಾಗುತ್ತಿರುವ, ಕರ್ನಾಟಕ ಮೂಲದ ರಿಯಾಜ್ ಭಟ್ಕಳ ಮತ್ತು ಆತನ ಸಹೋದರ ಇಸ್ಮಾಯಿಲ್ ಕೂಡ ಈ ಸ್ಫೋಟವನ್ನು ಪಾಕಿನಲ್ಲಿದ್ದುಕೊಂಡೇ ನಿಭಾಯಿಸಿದ್ದಾರೆ ಎಂಬ ಕುರಿತಾದ ಶಂಕೆಗಳೂ ಬಲವಾಗತೊಡಗಿವೆ.

ಪಾಕಿಸ್ತಾನದಲ್ಲಿ ಭಟ್ಕಳ ಸಹೋದರರು ಮತ್ತು ಮೊಹ್ಸಿನ್ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸಿದ ಅಬ್ದುಲ್ ಸುಭಾನ್ ಖುರೇಷಿ ಎಂಬ ಇಂಡಿಯನ್ ಮುಜಾಹಿದೀನ್ ಸದಸ್ಯ, ಮತ್ತೊಬ್ಬ ಐಎಂ ಸದಸ್ಯ ಜೈಬುದೀನ್ ಅನ್ಸಾರಿ ಹೆಸರು ಕೂಡ ಶಂಕಿತರ ಪಟ್ಟಿಯಲ್ಲಿವೆ.

ಕಾಮನ್ವೆಲ್ತ್ ಕ್ರೀಡಾ ಕೂಟಕ್ಕೆ ಮುನ್ನ ಭಾರತದ ಪ್ರಮುಖ ಪಟ್ಟಣಗಳು ಉಗ್ರರ ಹೇಯ ಕೃತ್ಯದ ಪಟ್ಟಿಯಲ್ಲಿವೆ ಎಂಬು ಬಂಧಿತ ಐಎಂ ಉಗ್ರಗಾಮಿ ಶಹಜಾದ್ ಈಗಾಗಲೇ ಬಾಯಿ ಬಿಟ್ಟಿದ್ದು, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈ ಬಗ್ಗೆ ಗಮನ ಕೇಂದ್ರೀಕರಿಸಿದೆ. ದಿಲ್ಲಿಯಲ್ಲಿ ಬಂಧಿತನಾಗಿರುವ ಶಹಜಾದ್ ಮತ್ತು ಗುಜರಾತಿನಲ್ಲಿ ಸೆರೆ ಸಿಕ್ಕಿರುವ 'ಟೆಕ್ಕೀ' ಉಗ್ರಗಾಮಿ ಪೀರ್‌ಭಾಯ್ ಅವರನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸುವತ್ತಲೂ ತನಿಖಾಧಿಕಾರಿಗಳು ಗಮನ ಹರಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ