ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ಗಲಭೆ ದೇಶಕ್ಕೆ ಅವಮಾನ'
(Muslims | democracy | Sachin Pilot | Babri masjid demolition)
ಬಾಬ್ರಿ ಮಸೀದಿ ಧ್ವಂಸ ಮತ್ತು ಗುಜರಾತ್ ಕೋಮುಗಲಭೆಗಳು ರಾಷ್ಟ್ರದ ಮುಖದಲ್ಲಿ ಕಪ್ಪು ಚುಕ್ಕೆ; ಇದರಿಂದ ರಾಷ್ಟ್ರ ಸಾಕಷ್ಟು ಅವಮಾನ ಎದುರಿಸಿದೆ ಎಂದಿರುವ ಕೇಂದ್ರ ಸಚಿವರೊಬ್ಬರು, ಇಂತಹ ಘಟನೆಗಳು ಮರುಕಳಿಸದಂತೆ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ಮುಸ್ಲಿಮರಿಗೆ ಭರವಸೆ ನೀಡಿದ್ದಾರೆ.
ರಾಜಧಾನಿಯಲ್ಲಿನ ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ನಡೆದ 'ದೋಹಾ ಡಿಬೇಟ್'ನಲ್ಲಿ ಪಾಲ್ಗೊಂಡಿದ್ದ ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್, 'ಗುಜರಾತ್ ಕೋಮುಗಲಭೆಗಾಗಿ ನಾವು ವಿಷಾದಿಸುತ್ತೇವೆ. ಬಾಬ್ರಿ ಮಸೀದಿ ಧ್ವಂಸ ನಮ್ಮ ಮುಖದಲ್ಲಿ ಕಪ್ಪು ಕಲೆಯಾಗಿದೆ. ಆದರೆ ನ್ಯಾಯದಿಂದ ಯಾರೂ ವಂಚಿತರಾಗುವುದಿಲ್ಲ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮತ್ತೆ ಸಂಭವಿಸದು ಎಂಬ ಭರವಸೆ ನಾವು ನೀಡುತ್ತೇವೆ' ಎಂದರು.
PR
ಜನಾಭಿಪ್ರಾಯದ ವಿರುದ್ಧ ಮಾತನಾಡಿದ ಸಚಿವರು, ಸಂವಿಧಾನವು ಧರ್ಮಾತೀತವಾಗಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಮತ್ತು ಮುಸ್ಲಿಮರು ಕಳೆದ 60 ವರ್ಷಗಳಿಂದ ಪ್ರಜಾಪ್ರಭುತ್ವದಲ್ಲಿ ಸಂತೋಷದಿಂದ ಜೀವನ ಸಾಗಿಸಿದ್ದಾರೆ ಎಂದರು.
ಭಾರತವನ್ನು ಮತ್ತು ಇಲ್ಲಿನ ಜನಜೀವನವನ್ನು ಸಂಪೂರ್ಣವಾಗಿ ಸರಿಯಾಗಿ ಅರ್ಥ ಮಾಡಿಕೊಂಡವರು, ಮುಸ್ಲಿಮರನ್ನು ಈ ದೇಶದಲ್ಲಿ ಗುರಿ ಮಾಡಲಾಗುತ್ತಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಮುಸ್ಲಿಮರು ರಾಷ್ಟ್ರಪತಿಯಾಗಿದ್ದಾರೆ, ಉಪ ರಾಷ್ಟ್ರಪತಿಯಾಗಿದ್ದಾರೆ, ಅಲ್ಲದೆ ಹಲವು ಪ್ರಮುಖ ಹುದ್ದೆಗಳಲ್ಲಿ ರಾರಾಜಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೈಲಟ್ ವಾದವನ್ನು ತಳ್ಳಿ ಹಾಕಿದ 'ಕೋವರ್ಟ್' ಮ್ಯಾಗಜಿನ್ ಸಂಪಾದಕಿ ಸೀಮಾ ಮುಸ್ತಾಫ, 'ಈ ದೇಶದಲ್ಲಿ ಮುಸ್ಲಿಮರು ತಾರತಮ್ಯಕ್ಕೊಳಗಾಗಿಯೇ ಬದುಕುತ್ತಿದ್ದಾರೆ. ಇದನ್ನು ಸಾಚಾರ್ ಸಮಿತಿ ವರದಿಯೂ ಬಹಿರಂಗಗೊಳಿಸಿದೆ. ಅವರಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ಕೆಲವು ಬಾರಿ ಸಂಘಟನೆಗಳನ್ನು ತುಷ್ಟೀಕರಿಸಲಾಗುತ್ತದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಸ್ಲಿಮರ ಪ್ರಸಕ್ತ ಪರಿಸ್ಥಿತಿಗೆ ಭಾರತ ಸರಕಾರ, ರಾಜಕೀಯ ಪಕ್ಷಗಳು ಮತ್ತು ಬಹುತೇಕ ಗಣ್ಯ, ಮೇಲ್ವರ್ಗದ ಮುಸ್ಲಿಂ ನಾಯಕರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ವ್ಯವಸ್ಥೆಯ ಕುರಿತು ತನ್ನ ಅಸಮಾಧಾನವನ್ನು ಸೀಮಾ ತೋಡಿಕೊಂಡರು.