ಆತನ ಹೆಸರು ಹುಸೇನ್ ಆಲಿ, ಶ್ರೀಮಂತನೇನೂ ಅಲ್ಲ. ಸಣ್ಣ ರೈತ ಅಷ್ಟೇ. ಯುವಕನೂ ಅಲ್ಲ, ವಯಸ್ಸು 80 ವರ್ಷ. ಇರುವುದು ನಾಲ್ಕೇ ಪತ್ನಿಯರು. ಅವರಿಗೆ 30 ಮಕ್ಕಳನ್ನು ಕರುಣಿಸಿದ್ದಾನೆ. ನಾಲ್ಕನೇ ಪತ್ನಿ ಎರಡು ತಿಂಗಳ ಗಂಡು ಮಗುವನ್ನು ತೊಟ್ಟಿಲಲ್ಲಿ ತೂಗುತ್ತಾ ಮೂರನೇ ಪತ್ನಿಯ ಮೂಲಕ 31ನೇ ಮಗುವಿನ ನಿರೀಕ್ಷೆಯಲ್ಲಿದ್ದಾನೆ!
ಅಸ್ಸಾಂ ರಾಜ್ಯದ ಲಖೀಂಪುರ ಜಿಲ್ಲೆಯ ಮುಖುಲಿ ಎಂಬ ಗ್ರಾಮದಲ್ಲಿ (ಗುವಾಹತಿಯಿಂದ ಸುಮಾರು 370 ಕಿಲೋ ಮೀಟರ್ ದೂರದಲ್ಲಿದೆ) ಇಂತಹ ಒಂದು ವಿಚಿತ್ರ 'ಅವಿಭಕ್ತ' ಕುಟುಂಬವಿದೆ. ಆದರೆ ಇದರಲ್ಲಿ ನನ್ನದೇನೂ ಇಲ್ಲ, ಎಲ್ಲಾ ದೇವರು ಕೊಟ್ಟದ್ದು ಎಂದು ಹೇಳುತ್ತಾನೆ ಹುಸೇನ್.
ನನಗೆ ನಾಲ್ಕು ಪತ್ನಿಯರು ಹಾಗೂ 30 ಮಕ್ಕಳಿದ್ದು ದೊಡ್ಡ ಕುಟುಂಬವನ್ನು ಹೊಂದಿದ್ದೇನೆ. ಇವೆಲ್ಲವೂ ದೇವರ ಕೊಡುಗೆ ಮತ್ತು ಹಾರೈಕೆ ಎಂದು ಕೈಯಲ್ಲಿನ ಹಸುಳೆಗೆ ತನ್ನ ಒಂದಡಿಯುದ್ದದ ದಾಡಿಯಿಂದ ಕಚಗುಳಿಯಿಡುತ್ತಾ ಮಗುಮ್ಮಾಗಿ ಹೇಳುತ್ತಾನೆ.
PR
ಯಾರನ್ನೂ ಕೂಡ ತೂಕ ಅಥವಾ ಎತ್ತರದಿಂದ ಅಳೆಯಬೇಡಿ. ನಾನು ಈಗಲೂ ಯುವ ಹೃದಯವನ್ನು ಹೊಂದಿದ್ದೇನೆ. ಆದರೆ ಮತ್ತೆ ಮದುವೆಯಾಗಲಾರೆ. ಅದಕ್ಕಿಂತಲೂ ಹೆಚ್ಚಾಗಿ 30 ಮಕ್ಕಳ ಜತೆ ನಾನು ಸಂತೋಷವಾಗಿದ್ದೇನೆ. ಹೆಂಡತಿಯರಲ್ಲೊಬ್ಬಳು ಗರ್ಭಿಣಿಯಾಗಿದ್ದು, ಮತ್ತೊಂದು ಮಗುವನ್ನು ಶೀಘ್ರದಲ್ಲೇ ಪಡೆಯಲಿದ್ದೇನೆ ಎಂದು ಹೇಳುತ್ತಾ ತನ್ನ ಪತ್ನಿಯರನ್ನು ಮನೆಯಿಂದ ಹೊರಗೆ ಬರುವಂತೆ ಕರೆ ನೀಡಿದ.
ಶತಕದ ಹತ್ತಿರದಲ್ಲಿರುವ ಈ ಹುಸೇನನ ದೊಡ್ಡ ಮಗನಿಗೀಗ 40 ವರ್ಷವಾದರೂ ತನ್ನ ಜ್ಞಾಪಕ ಶಕ್ತಿಯ ಬಗ್ಗೆ ಆತನಿಗೆ ಸಂಶಯವಿಲ್ಲ. ಆದರೆ ಮಕ್ಕಳ ಹೆಸರನ್ನು ಹೇಳುವಂತೆ ಆತನಲ್ಲಿ ಕೇಳಿಕೊಂಡಾಗ ಪೂರ್ಣಗೊಳಿಸಲು ವಿಫಲನಾಗಿದ್ದಾನೆ.
ನಿಮ್ಮ ಪ್ರಕಾರ ಒಬ್ಬ ತಂದೆಯಾಗಿ ನನ್ನ ಮಕ್ಕಳ ಹೆಸರುಗಳನ್ನು ನಾನು ಹೇಳಲು ಸಾಧ್ಯವಿಲ್ಲ ಎಂದೇ ಎಂದು ಸ್ಪಷ್ಟ ಕೋಪವನ್ನು ಹೊರಗೆಡವುತ್ತಾ ಮಕ್ಕಳ ಹೆಸರುಗಳನ್ನು ಒಂದೊಂದಾಗಿಯೇ ಹೇಳತೊಡಗಿದನಾದರೂ ಸುಮಾರು 15 ಮಕ್ಕಳ ಹೆಸನ್ನು ಆತನಿಗೆ ಹೇಳಲು ಸಾಧ್ಯವಾಗಲಿಲ್ಲ.
ಇದನ್ನು ಒಪ್ಪಿಕೊಳ್ಳುತ್ತಾ ಮುಗ್ಧ ನಗುವಿನೊಂದಿಗೆ, 'ಈಗ ಅವರ ಹೆಸರುಗಳನ್ನು ನಾನು ಮರೆತಿರಬಹುದು, ಆದರೆ ಅವರ ಮುಖ ಕಂಡ ಕೂಡಲೇ ಅವರ ಹೆಸರುಗಳು ನನಗೆ ನೆನಪಿಗೆ ಬರುತ್ತವೆ' ಎನ್ನುತ್ತಾನಾತ.
ನಾಲ್ಕು ಹೆಂಡತಿಯರಿರುವ ಇಷ್ಟು ದೊಡ್ಡ ಕುಟುಂಬವನ್ನು ಹೊಂದಿರುವುದಕ್ಕೆ ನನಗೇನೂ ವಿಷಾದವಿಲ್ಲ. ನನ್ನೆಲ್ಲ ಪತ್ನಿಯರೂ ಸಂಭಾವಿತರು ಮತ್ತು ಎಲ್ಲರಿಗೂ ಕಾಳಜಿಯಿದೆ ಎಂದು ಹುಸೇನ್ ಹೇಳಿದರೆ, ಆತನ ಪತ್ನಿಯರು ಅದಕ್ಕೆ ಸಾಥ್ ನೀಡುತ್ತಾರೆ.
'ನಮ್ಮ ಗಂಡ ಒಳ್ಳೆಯ ಮನುಷ್ಯ ಮತ್ತು ಜವಾಬ್ದಾರಿಯುತ ವ್ಯಕ್ತಿ' ಎಂದು ಹುಸೇನ್ ಆಲಿಯಿಂದ ಎಂಟು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಪಡೆದಿರುವ ಮೊದಲ ಹೆಂಡತಿ ಮೊಹಿರೂನ್ ನೆಸ್ಸಾ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾಳೆ.
ಒಂದೇ ಕಂಪೌಂಡಿನೊಳಗೆ ನಾಲ್ಕು ಮನೆಗಳನ್ನು ನಿರ್ಮಿಸಲಾಗಿದೆ. ಆಲಿ ಎಲ್ಲಾ ಮನೆಗಳಿಗೂ ಹೋಗುತ್ತಾನೆ. ಯಾವುದೇ ಸಮಸ್ಯೆಗಳು, ಗಲಾಟೆಗಳು ಇದುವರೆಗೂ ನಡೆದಿಲ್ಲವಂತೆ.
ಈಗ ಸುಮಾರು 15 ಮಕ್ಕಳಿಗೆ ಮದುವೆಯೂ ಆಗಿ, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಿಂದೆಲ್ಲ ಕುಟುಂಬವನ್ನು ನಿಭಾಯಿಸಲು ಹುಸೇನ್ ಕಷ್ಟಪಟ್ಟದ್ದಿದೆ. ಆದರೆ ಈಗ ಮಕ್ಕಳು ದುಡಿಯುತ್ತಿರುವುದರಿಂದ ಆರ್ಥಿಕ ತೊಂದರೆಯೇನೂ ಇಲ್ಲವಂತೆ.