ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆ ಇಳಿಸದಿದ್ದರೂ ಸಕ್ಕರೆ ರಫ್ತಿಗೆ ಮುಂದಾಗಿದೆ ಕೇಂದ್ರ!
(Sugar export | Congress | Central government | European Union)
ಅಗತ್ಯ ವಸ್ತುಗಳ ಬೆಲೆಯೇರಿಕೆಯ ಜತೆ ದೇಶದಲ್ಲಿ ಸಕ್ಕರೆ ಸಾಮಾನ್ಯ ಜನತೆಗೆ 'ಕಹಿ'ಯಾಗುತ್ತಿರುವ ನಡುವೆಯೇ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಐರೋಪ್ಯ ಒಕ್ಕೂಟಕ್ಕೆ 10,000 ಟನ್ ಸಕ್ಕರೆಯನ್ನು ರಫ್ತು ಮಾಡುವ ಅಚ್ಚರಿಯ ನಿರ್ಧಾರಕ್ಕೆ ಬಂದಿದೆ.
ಆದರೆ ಈ ನಿರ್ಧಾರ ವ್ಯಾಪಕ ಟೀಕೆಗೊಳಗಾಗುತ್ತಿದೆ. ಕಾಂಗ್ರೆಸ್ ಕೂಡ ಸರಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ಸರಕಾರ ಹೆಜ್ಜೆ ಇಡಬೇಕಿತ್ತು ಎಂದು ಅದು ಅಭಿಪ್ರಾಯಪಟ್ಟಿದೆ.
ಯುಪಿಎ ಸರಕಾರವು ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ಇಳಿಸಲು ಹರಸಾಹಸ ಮಾಡುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಇದರ ನಡುವೆಯೂ ಬೃಹತ್ ಪ್ರಮಾಣದ ಸಕ್ಕರೆಯನ್ನು ಐರೋಪ್ಯ ಒಕ್ಕೂಟಕ್ಕೆ ರಫ್ತು ಮಾಡಲು ನಿರ್ಧರಿಸಿರುವುದು ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಕಾಂಗ್ರೆಸ್ ಕೂಡ ಖಾರ ಪ್ರತಿಕ್ರಿಯೆ ನೀಡಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಿರುವ ಸಂದರ್ಭದಲ್ಲಿ ಸಕ್ಕರೆಯನ್ನು ರಫ್ತು ಮಾಡಲು ನಿರ್ಧರಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಕೃಷಿ ಸಚಿವರು ಮತ್ತು ಅವರ ಸಚಿವಾಲಯದಿಂದ ಮಾಹಿತಿಗಳನ್ನು ಪಡೆಯಬೇಕಾಗುತ್ತದೆ. ಆ ರೀತಿ ವಾಸ್ತವ ಮಾಹಿತಿ ಪಡೆದ ನಂತರ ಇಂತಹ ನಿರ್ಧಾರವನ್ನು ತೆಗೆದುಕೊಂಡಿರುವುದಾದರೆ ಸರಕಾರದ ನಿರ್ಧಾರ ಸರಿಯಲ್ಲ ಎಂದು ತಿವಾರಿ ಹೇಳಿದ್ದಾರೆ.
ಐರೋಪ್ಯ ಒಕ್ಕೂಟಕ್ಕೆ 10,000 ಟನ್ ಸಕ್ಕರೆ ರಫ್ತು ಮಾಡಲು ಕೇಂದ್ರ ಸರಕಾರವು ಸೋಮವಾರ ನಿರ್ಧರಿಸಿದೆ. 2009-10ರ ಆರ್ಥಿಕ ವರ್ಷದಲ್ಲಿ ಐರೋಪ್ಯ ಒಕ್ಕೂಟಕ್ಕಾಗಿ 10,000 ಟನ್ ಬಿಳಿ ಅಥವಾ ಸಂಸ್ಕರಿತ ಸಕ್ಕರೆಯನ್ನು ಬಿಡುಗಡೆ ಮಾಡಲು ವಿದೇಶಾಂಗ ವ್ಯವಹಾರದ ಪ್ರಧಾನ ನಿರ್ದೇಶನಾಲಯ ಒಪ್ಪಿಗೆ ಸೂಚಿಸಿತ್ತು.
ಅದೇ ಹೊತ್ತಿಗೆ ಭಾರತವು ಸಕ್ಕರೆ ರಫ್ತಿನ ಮೇಲೆ ನಿಷೇಧವನ್ನೇನೂ ಹೇರಿಲ್ಲವಾದರೂ, ಸಂಬಂಧಪಟ್ಟವರ ಅನುಮತಿಯನ್ನು ಮೊದಲೇ ಪಡೆಯುವುದು ಅಗತ್ಯ. ಇದೇ ನಿಟ್ಟಿನಲ್ಲಿ 2009ರ ಜನವರಿ ನಂತರ ಆಹಾರ ವಸ್ತುಗಳ ಸಚಿವಾಲಯವು ಅನುಮತಿ ನೀಡಿರಲಿಲ್ಲ. ಪ್ರಸಕ್ತ ಭಾರತದಲ್ಲಿ ಪೂರೈಕೆ ಕೊರತೆಯಿಂದಾಗಿ ಸಕ್ಕರೆ ಬೆಲೆ ಕಳೆದೊಂದು ವರ್ಷದ ಅವಧಿಯಲ್ಲಿ ಶೇ.58.96ರಷ್ಟು ಹೆಚ್ಚಾಗಿದೆ.
ಆಲ್ಕೋಹಾಲ್, ಚಾಕೊಲೇಟ್‌ಗಳಿಗೆ ಸಕ್ಕರೆ ಕೊಡ್ಬೇಡಿ... ಸಕ್ಕರೆ ಬೆಲೆಯೇರಿಕೆಯ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್, ಕೇಂದ್ರ ಕೃಷಿ ಮತ್ತು ಆಹಾರ ಖಾತೆ ಸಚಿವ ಶರದ್ ಪವಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಸಾಫ್ಟ್ ಡ್ರಿಂಕ್ಸ್‌ಗಳು, ಚಾಕೊಲೇಟುಗಳು, ಐಸ್‌ಕ್ರೀಂ ಮತ್ತು ಮದ್ಯದ ಕಂಪನಿಗಳು ದೇಶೀಯ ಸಕ್ಕರೆಯನ್ನು ಬಳಸದಂತೆ ನಿಷೇಧ ಹೇರಬೇಕು ಎಂದು ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಒತ್ತಾಯಿಸಿದೆ.
ಹೀಗೆ ಮಾಡಿದಲ್ಲಿ ಮಾರುಕಟ್ಟೆಗೆ ಸಕ್ಕರೆ ಪೂರೈಕೆ ಪ್ರಮಾಣ ಶೇ.20ರಷ್ಟು ಹೆಚ್ಚುತ್ತದೆ. ಪರಿಣಾಮ ಪ್ರತೀ ಕೇಜಿ ಸಕ್ಕರೆ ಬೆಲೆ 50ರಿಂದ 40 ರೂಪಾಯಿಗಳಿಗೆ ಇಳಿಕೆಯಾಗಬಹುದು. ಇಲ್ಲದೇ ಇದ್ದರೆ ಶೀಘ್ರದಲ್ಲೇ 60 ರೂಪಾಯಿಗಳನ್ನು ಮುಟ್ಟಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.