ಡೆಹ್ರಾಡೂನ್, ಮಂಗಳವಾರ, 16 ಫೆಬ್ರವರಿ 2010( 18:16 IST )
ಡೆಹ್ರಾಡೂನ್: ಹೈದರಾಲಿಯು ಚಿತ್ರದುರ್ಗದ ಮೇಲೆ ಒಮ್ಮಿಂದೊಮ್ಮೆಲೇ ದಾಳಿ ನಡೆಸಿದಾಗ ಕೋಟೆಯ ಕಾವಲುಗಾರನ ಪತ್ನಿ ಒನಕೆ ಓಬವ್ವ ರಾಜ್ಯವನ್ನು ರಕ್ಷಿಸಲು ಒನಕೆ ಕೈಗೆತ್ತಿಕೊಂಡಿದ್ದಳು. ಈಗ ಚಿರತೆ ಬಾಯಿಯಿಂದ ಗಂಡನನ್ನು ರಕ್ಷಿಸಲು ಓಬವ್ವನ ಮಾದರಿಯನ್ನು ಅನುಸರಿಸಿದ ಘಟನೆಯೊಂದು ದೂರದ ಉತ್ತರಾಂಚಲದಿಂದ ವರದಿಯಾಗಿದೆ.
ಉತ್ತರಾಂಚಲದ ಮನೆಯೊಂದಕ್ಕೆ ಆಗಂತುಕನಾಗಿ ನುಗ್ಗಿದ್ದ ಚಿರತೆಯೊಂದಿಗೆ ವೀರಾವೇಶದಿಂದ ಬಡಿದಾಡಿದ ಈ ಮಹಿಳೆ ತನ್ನ ಗಂಡನನ್ನು ರಕ್ಷಿಸಿದ್ದಾಳೆ.
ಇಲ್ಲಿನ ಬಾಗೇಶ್ವರ ಜಿಲ್ಲೆಯ ತಲ್ಲಾ ಬಿಲೋನಾ ಗ್ರಾಮದಲ್ಲಿನ ನಿರ್ಮಾಣ ಹಂತದಲ್ಲಿನ ಮನೆಯಲ್ಲಿ ಮಲಗಿದ್ದ ಹೊತ್ತಿನಲ್ಲಿ ಚಿರತೆ ನುಗ್ಗಿತ್ತು. ಈ ಸಂದರ್ಭದಲ್ಲಿ ಗಂಡನ ಮೇಲೆ ದಾಳಿ ನಡೆಸಿದ್ದನ್ನು ನೋಡಿದ ಮಹಿಳೆ ಹುಲಿಯ ಮೇಲೆ ದೊಣ್ಣೆಯಿಂದ ಹೊಡೆದು ಗಂಡನ ಪ್ರಮಾಣವನ್ನು ಉಳಿಸಿದ್ದಾಳೆ. ಶನಿವಾರ ಮತ್ತು ಭಾನುವಾರದ ನಡುವಿನ ರಾತ್ರಿ ಈ ಘಟನೆ ನಡೆದಿದೆ.
ಬಿಷ್ನೂಲಿ ದೇವಿ ಮತ್ತು ಆಕೆಯ ಗಂಡ ರಾಮ್ ಪ್ರಸಾದ್ ಮಲಗಿದ್ದ ಕೋಣೆಯೊಳಗೆ ರಾತ್ರಿ ಚಿರತೆ ನುಗ್ಗಿತ್ತು. ಈ ಸಂದರ್ಭದಲ್ಲಿ ಎಚ್ಚರಗೊಂಡಿದ್ದ ಪ್ರಸಾದ್ ಬೊಬ್ಬೆ ಹೊಡೆಯಲು ಆರಂಭಿಸಿದ್ದ. ತಕ್ಷಣವೇ ಆತನ ಮೇಲೆ ದಾಳಿ ನಡೆಸಿದ ಚಿರತೆ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಲು ಯತ್ನಿಸುತ್ತಿತ್ತು.
ಈ ಸಂದರ್ಭದಲ್ಲಿ ಭೀತಿಗೊಂಡರೂ ಧೃತಿಗೆಡದ ಪ್ರಸಾದ್ ಪತ್ನಿ ದೇವಿ ಮರದ ದೊಣ್ಣೆಯೊಂದನ್ನು ತೆಗೆದುಕೊಂಡು ಚಿರತೆಯ ಮೇಲೆ ಹಿಂದಿನಿಂದ ದಾಳಿ ನಡೆಸಿದಳು. ಗಂಡನನ್ನು ಬಿಟ್ಟು ಓಡುವವರೆಗೂ ಆಕೆ ಹೊಡೆಯುತ್ತಲೇ ಇದ್ದಳು ಎಂದು ಆಕೆಯ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಚಿರತೆ ಮತ್ತೊಂದು ಕೋಣೆಗೆ ನುಗ್ಗಿದ ನಂತರ ಹೊರಗಿನಿಂದ ದೇವಿ ಮತ್ತು ಆಕೆಯ ಮನೆಯವರು ಬಾಗಿ ಭದ್ರಪಡಿಸಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೆಲವು ಗಂಟೆಗಳ ನಂತರ ಬಂದ ಸರಕಾರಿ ಸಿಬ್ಬಂದಿಗಳು ಚಿರತೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರತ್ಯೇಕ ಘಟನೆಯೊಂದರಲ್ಲಿ ಇಲ್ಲೇ ಪಕ್ಕದ ಅಲ್ಮೋರಾ ಜಿಲ್ಲೆಯ ಸ್ಯಾಹಿದೇವಿ ಪ್ರದೇಶದಲ್ಲೂ ಚಿರತೆಯೊಂದನ್ನು ಸೆರೆ ಹಿಡಿಯಲಾಗಿದೆ.