ತೆಲಂಗಾಣ ಸರ್ವಪಕ್ಷಗಳ ಜಂಟಿ ಕ್ರಿಯಾ ಸಮಿತಿಯಲ್ಲೇ (ಜೆಎಸಿ) ಬಿರುಕು ಹುಟ್ಟಿಸುವ ತಂತ್ರವೊಂದು ನಡೆದಿದೆ ಎನ್ನಲಾಗಿದ್ದು, ಕೇಂದ್ರ ಸರಕಾರ ನೇಮಿಸಿರುವ ಶ್ರೀಕೃಷ್ಣ ಸಮಿತಿಯ ನಿಲುವುಗಳನ್ನು ವಿರೋಧಿಸಿ ರಾಜೀನಾಮೆ ಸಲ್ಲಿಸಲು ಕಾಂಗ್ರೆಸ್ ಶಾಸಕರು ಹಿಂದಕ್ಕೆ ಸರಿದಿರುವ ನಡುವೆಯೇ ಟಿಆರ್ಎಸ್ ನಿಲುವಿಗೆ ಬೆಂಬಲ ಸೂಚಿಸಿ ತೆಲುಗು ದೇಶಂ ಪಕ್ಷದ 35 ಶಾಸಕರು ರಾಜೀನಾಮೆ ನೀಡಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಕುರಿತು ವರದಿ ಸಲ್ಲಿಸಲು ಕೇಂದ್ರ ಸರಕಾರ ನೇಮಿಸಿರುವ ಶ್ರೀಕೃಷ್ಣ ಸಮಿತಿಯು ಹೊಂದಿರುವ ನೀತಿ ನಿಬಂಧನೆಗಳು ತೆಲಂಗಾಣ ಪರವಾಗಿ ಮಾತ್ರ ಇರುವುದರ ಬದಲಾಗಿ ಅಖಂಡ ಆಂಧ್ರಪ್ರದೇಶಕ್ಕೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ನಾವು ವಿರೋಧಿಸುತ್ತೇವೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಹೇಳಿದ್ದರು.
ಇದೇ ಹಿನ್ನೆಲೆಯಲ್ಲಿ ತೆಲಂಗಾಣ ಪ್ರಾಂತ್ಯದ ಟಿಆರ್ಎಸ್‌ನ 15 ಶಾಸಕರು ರಾಜೀನಾಮೆ ನೀಡಿದ್ದರು. ಅವುಗಳಲ್ಲಿ 12 ರಾಜೀನಾಮೆಗಳನ್ನು ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಈಗಾಗಲೇ ಸ್ವೀಕರಿಸಿದ್ದಾರೆ.
ನಂತರ ನಡೆದ ಬೆಳವಣಿಗೆಯಲ್ಲಿ ಸರ್ವಪಕ್ಷಗಳ ಜಂಟಿ ಕ್ರಿಯಾ ಸಮಿತಿಯಲ್ಲೇ ಒಡಕು ಮೂಡಿರುವುದು ಸ್ಪಷ್ಟವಾಗಿದ್ದು, ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಶಾಸಕ-ಸಂಸದರನ್ನು ಒಲಿಸಿಕೊಳ್ಳುವಲ್ಲಿ ಕೇಂದ್ರದ ಕಾಂಗ್ರೆಸ್ ನಾಯಕತ್ವ ಯಶಸ್ವಿಯಾಗಿದೆ ಎನ್ನಲಾಗಿದೆ. ಇದೇ ನಿಟ್ಟಿನಲ್ಲಿ ಈ ಪ್ರಾಂತ್ಯದ ಕಾಂಗ್ರೆಸ್ ಜನಪ್ರತಿನಿಧಿಗಳು ರಾಜೀನಾಮೆ ಸಲ್ಲಿಸಲು ನಿರಾಕರಿಸಿದ್ದಾರೆ.
ಅಲ್ಲದೆ ತಾವು ಟಿಆರ್ಎಸ್ ಪಕ್ಷದ ಪೋಸ್ಟ್‌ಮನ್‌ಗಳಲ್ಲ. ಚಂದ್ರಶೇಖರ ರಾವ್ ಅವರ ಹಾದಿ ಸರಿಯಿಲ್ಲ. ನಾವು ನಮ್ಮದೇ ಹಾದಿಯ ಮೂಲಕ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ತೆಲಂಗಾಣ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿದ್ದು, ಕೇಂದ್ರ ಸರಕಾರವು ಜೆಎಸಿಯಲ್ಲೇ ಹುಳಿ ಹಿಂಡಿದೆ ಎಂದು ವಿಶ್ಲೇಷಣೆ ನಡೆಸಲಾಗುತ್ತಿದೆ.
ಆದರೆ ಇದೇ ಜೆಎಸಿಯ ಟಿಡಿಪಿ ಶಾಸಕರು ತೆಲಂಗಾಣ ಪರ ಮತ್ತು ಕೇಂದ್ರದ ಸಮಿತಿ ವಿರೋಧಿಸುವ ನಿಲುವಿಗೆ ಬಂದಿದ್ದು, 35 ಮಂದಿ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ. ಒತ್ತಡ ಹೇರುವ ಸಲುವಾಗಿ ತಮ್ಮ ರಾಜೀನಾಮೆಗಳನ್ನು ಜೆಎಸಿ ಸಂಚಾಲಕರಿಗೆ ಕಳುಹಿಸಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ.
ಜೆಎಸಿ ಸಂಚಾಲಕ ಎಂ. ಕೋದಂಡರಾಮ್ ಅವರಿಗೆ ಪಕ್ಷದ ಈ ಪ್ರಾಂತ್ಯದ 35 ಶಾಸಕರ ರಾಜೀನಾಮೆಗಳನ್ನು ರವಾನಿಸಿದ್ದೇವೆ. ಇತರ ಮೂವರು ಶಾಸಕರು ಅಲಭ್ಯರಾಗಿರುವ ಕಾರಣ ಅವರ ರಾಜೀನಾಮೆಗಳನ್ನು ಕಳುಹಿಸಲು ಸಾಧ್ಯವಾಗಿಲ್ಲ ಎಂದು ಟಿಡಿಪಿ ಶಾಸಕ ಎಂ. ನರಸಿಂಹುಲು ತಿಳಿಸಿದ್ದಾರೆ.
ಈ ಪಕ್ಷದ ಓರ್ವ ಶಾಸಕ ಈಗಾಗಲೇ ರಾಜೀನಾಮೆಯನ್ನು ಸ್ಪೀಕರ್ ಅವರಿಗೆ ನೀಡಿದ್ದು, ಅದನ್ನು ಸ್ವೀಕರಿಸಲಾಗಿದೆ.
ಟಿಡಿಪಿ ಶಾಸಕರು ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸುವ ಬದಲು ಜೆಎಸಿ ಸಂಚಾಲಕರಿಗೆ ರಾಜೀನಾಮೆಯನ್ನು ರವಾನಿಸಿದ್ದು, ಕಾಂಗ್ರೆಸ್ ಶಾಸಕರ ರಾಜೀನಾಮೆಗಳನ್ನು ಪಡೆಯುವಂತೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದಾರೆ ಎಂದು ಹೇಳಲಾಗಿದೆ.
294 ಶಾಸಕರನ್ನು ಹೊಂದಿರುವ ಆಂಧ್ರಪ್ರದೇಶ ವಿಧಾನಸಭೆಗೆ 119 ಶಾಸಕರ ಬಲ ತೆಲಂಗಾಣ ಪ್ರಾಂತ್ಯದಿಂದಿದೆ. ರಾಜ್ಯದ 42 ಸಂಸದರಲ್ಲಿ 17 ಮಂದಿ ತೆಲಂಗಾಣದವರು. ಹೀಗಾಗಿ ತೆಲಂಗಾಣ ಪ್ರಾಂತ್ಯದ ಎಲ್ಲಾ ಶಾಸಕರು ಪಕ್ಷಭೇದ ಮರೆತು ತಮ್ಮ ರಾಜೀನಾಮೆಗಳನ್ನು ನೇರವಾಗಿ ಸ್ಪೀಕರ್ ಅವರಿಗೆ ಸಲ್ಲಿಸಿದಲ್ಲಿ ಸರಕಾರ ಬಿದ್ದು ಹೋಗುತ್ತದೆ. ಇದನ್ನು ತಪ್ಪಿಸಲು ಕಾಂಗ್ರೆಸ್ ಜೆಎಸಿಯೊಳಗೆ ಪಿತೂರಿ ನಡೆಸಿದೆ ಎಂದು ಹೇಳಲಾಗುತ್ತಿದೆ.