ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಹಾದಿಯಲ್ಲಿ ಗಡ್ಕರಿ; ದಲಿತರ ಮನೆಯಲ್ಲಿ ಊಟ (lunch in Dalit's house | Rahul Gandhi | Nitin Gadkari | BJP)
Bookmark and Share Feedback Print
 
ದಲಿತರನ್ನು ಸೆಳೆಯಲು ರಾಹುಲ್ ಗಾಂಧಿ ಬಳಸಿದ ಹಾದಿಯಲ್ಲೇ ಸಾಗುತ್ತಾ ಅವರಿಗೇ ಸವಾಲು ಹಾಕಲು ಹೊರಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ದಲಿತ ಸಮುದಾಯದ ಮನೆಯಲ್ಲಿ ಊಟ ಮಾಡಿ ಇತರ ನಾಯಕರಿಗೆ ಮಾದರಿಯಾಗಿದ್ದಾರೆ.

ಇಂದೋರ್‌ನಲ್ಲಿ ಇಂದಿನಿಂದ ನಡೆಯುವ ಪಕ್ಷದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶಕ್ಕೂ ಹಿಂದಿನ ದಿನ ಆಗಮಿಸಿದ 52ರ ಹರೆಯದ ಗಡ್ಕರಿಯವರು ದಲಿತನ್ನು ಆಕರ್ಷಿಸುವ ಹಲವು ತಂತ್ರಗಳನ್ನು ಇಲ್ಲಿ ಅನುಸರಿಸಿದರು. ಮೊದಲಿಗೆ ಬಿ.ಆರ್. ಅಂಬೇಡ್ಕರ್ ಅವರು ಹುಟ್ಟಿದ ಸ್ಥಳಕ್ಕೆ ಹೋಗಿ, ದಲಿತ ನಾಯಕನ ಪುತ್ಥಳಿಗೆ ಹೂಗುಚ್ಛಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು.

ಬಳಿಕ ದಲಿತ ವಾಲ್ಮೀಕಿ ಸಮುದಾಯದವರಾದ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಪ್ರೀತಿ ಕರೊಸಿಯಾ ಅವರ ಮನೆಯಲ್ಲಿ ಊಟೋಪಚಾರ ಮಾಡಿ ಬಿಜೆಪಿಯೂ ದಲಿತರ ಪರವಾಗಿದೆ ಎಂಬ ಭಾವನೆಯನ್ನು ಮೂಡಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಇತರ ದುರ್ಬಲ ಸಮುದಾಯಗಳತ್ತ ಬಿಜೆಪಿ ಇನ್ನೂ ಹೆಚ್ಚಿನ ಗಮನ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಗಡ್ಕರಿ ತಿಳಿಸಿದ್ದಾರೆ.

ಈ ಎಲ್ಲಾ ಸಮುದಾಯಗಳನ್ನು ಆಕರ್ಷಿಸುತ್ತಾ ಶೇ.10ರಷ್ಟು ಓಟ್ ಬ್ಯಾಂಕ್ ಹೆಚ್ಚಿಸುವುದು ಬಿಜೆಪಿಯ ನೂತನ ಅಧ್ಯಕ್ಷರ ಯೋಜನೆ. ಸಮಾಜದ ಕೆಳಸ್ತರದಲ್ಲಿರುವವರ ಪರ ಅತ್ಯುತ್ತಮ ಅಭಿವೃದ್ಧಿ ಕೆಲಸ ಮತ್ತು ಆಡಳಿತವನ್ನು ನೀಡುವ ಗುರಿ ಬಿಜೆಪಿಯದ್ದು ಎಂದೂ ಅವರು ಭರವಸೆ ನೀಡಿದ್ದಾರೆ.

ಬಿಜೆಪಿ ಟೆಂಟ್ ಮೀಟಿಂಗ್...
ಬುಧವಾರದಿಂದ ಮೂರು ದಿನಗಳ ಕಾಲ ಇಂದೋರ್‌ನಲ್ಲಿ ನಡೆಯುವ ರಾಷ್ಟ್ರೀಯ ಆತ್ಮಾವಲೋಕನಾ ಸಭೆ ನಡೆಯುತ್ತಿದ್ದು, ನಾಯಕರುಗಳು ಟೆಂಟುಗಳಲ್ಲಿ ತಂಗಲಿದ್ದಾರೆ.

2009ರ ಲೋಕಸಭಾ ಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸ ಬಳಿಕ ಮುಂದಿನ ತಂತ್ರಗಳು ಹೇಗೆ ಎಂಬುದನ್ನು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ. ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆಯಾದ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿರುವುದರಿಂದ ಹೆಚ್ಚು ಮಹತ್ವ ನೀಡಲಾಗಿದೆ.

ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಪಕ್ಷದ 5,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇವರೆಲ್ಲರಿಗೂ ಇಲ್ಲಿನ ಕುಶ್‌ಭಾವ್ ಠಾಕ್ರೆ ನಗರದ ಮೈದಾನದಲ್ಲಿ 1,300ಕ್ಕೂ ಹೆಚ್ಚು ಟೆಂಟ್‌ಗಳನ್ನು ಹಾಕಲಾಗಿದೆ.

ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮುಂತಾದ ಅಗ್ರ ನಾಯಕರು ಐಷಾರಾಮಿ ಟೆಂಟ್‌ಗಳಲ್ಲಿ ಉಳಿದುಕೊಳ್ಳಲಿದ್ದಾರೆ. ಇವರ ಟೆಂಟುಗಳಲ್ಲಿ ಎಸಿ, ಡಬ್ಬಲ್ ಬೆಡ್, ಸೋಫಾ, ಡ್ರೆಸ್ಸಿಂಗ್ ಟೇಬಲ್, ಕಂಪ್ಯೂಟರ್, ಬಿಸಿ ನೀರು ಹೀಗೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಆದರೂ ಭಯೋತ್ಪಾದನಾ ದಾಳಿ ಬೆದರಿಕೆಗಳ ಹಿನ್ನೆಲೆಯಲ್ಲಿ ಪ್ರಮುಖ ನಾಯಕರನ್ನು ಟೆಂಟ್‌ಗಳಲ್ಲಿ ಉಳಿಸಿಕೊಳ್ಳುವ ಬದಲು ಹೊಟೇಲುಗಳಲ್ಲಿ ವ್ಯವಸ್ಥೆ ಮಾಡುವ ಯೋಚನೆಯೂ ಇದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಕರ್ನಾಟಕದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಅನಂತ ಕುಮಾರ್ ಮುಂತಾದವರು ಈ ಕಾರ್ಯಕಾರಿಣಿಯಲ್ಲಿ ಭಾಗವಹಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ