ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಬಿಐ ತನಿಖೆಗೆ ಹೈಕೋರ್ಟ್‌ಗಳೂ ಆದೇಶಿಸಬಹುದು (CBI probe | Supreme Court | state governments | K G Balakrishnan)
Bookmark and Share Feedback Print
 
ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಸರ್ವೋಚ್ಚ ನ್ಯಾಯಾಲಯದ ಕರ್ತವ್ಯವಾಗಿದ್ದು, ವಿಶೇಷ ಪ್ರಕರಣಗಳಲ್ಲಿ ರಾಜ್ಯ ಸರಕಾರಗಳ ಅನುಮತಿ ಇಲ್ಲದಿದ್ದರೂ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ನೀಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇಂತಹ ಅಧಿಕಾರವನ್ನು ರಾಷ್ಟ್ರದ ಉನ್ನತ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳು ಎಚ್ಚರಿಕೆಯಿಂದ ಬಳಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಬುಧವಾರ ಸರ್ವಾನುಮತದಿಂದ ತೀರ್ಪು ನೀಡಿದೆ.

ರಾಜ್ಯ ಸರಕಾರಗಳ ಅನುಮತಿ ಇಲ್ಲದೇ ಇದ್ದರೂ ಎಚ್ಚರಿಕೆಯಿಂದ ಮತ್ತು ವಿಶೇಷ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಗಳು ಸಿಬಿಐ ತನಿಖೆಗಳಿಗೆ ನೇರವಾಗಿ ಆದೇಶ ನೀಡಬಹುದಾಗಿದೆ. ನ್ಯಾಯಾಲಯಗಳಿಗೆ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹೊಣೆಯಿರುವುದರಿಂದ ಸೂಕ್ಷ್ಮ ಪ್ರಕರಣಗಳಲ್ಲಿ ಇಂತಹ ಕ್ರಮಗಳಿಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಂದಾಗಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಆರ್.ವಿ. ರವೀಂದ್ರನ್, ಡಿ.ಕೆ. ಜೈನ್, ಪಿ. ಸತ್ಯಶಿವಂ ಮತ್ತು ಜೆ.ಎಂ. ಪಾಂಚಾಲ್ ಅವರನ್ನೊಳಗೊಂಡ ಪೀಠವು, 'ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಟಿಲ ಪ್ರಕರಣಗಳಲ್ಲಿ ವಿಶೇಷ, ಸೂಕ್ಷ್ಮ ಸಂದರ್ಭಗಳಲ್ಲಿ ರಾಜ್ಯಗಳ ಆಕ್ಷೇಪವಿದ್ದರೂ ಈ ಅಧಿಕಾರವನ್ನು ಮಿತವಾಗಿ ಬಳಸಬಹುದಾಗಿದೆ' ಎಂದು ಹೇಳಿದೆ.

ಇಂತಹ ನಿಬಂಧನೆಗಳು ಇಲ್ಲದೇ ಇದ್ದರೆ ಮಾಮೂಲಿ ಪ್ರಕರಣಗಳಿಗೂ ನ್ಯಾಯಾಲಯಗಳು ಆದೇಶ ನೀಡುವ ಸಾಧ್ಯತೆಗಳಿರುವುದರಿಂದ ಸಿಬಿಐ ಅಪಾರ ಪ್ರಕರಣಗಳ ತನಿಖೆಯ ಹೊರೆಯನ್ನು ಅನುಭವಿಸಬೇಕಾದೀತು ಎಂದು ಪೀಠವು ತಿಳಿಸಿದೆ.

ಸಂವಿಧಾನದ 21ನೇ ವಿಧಿಯಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದನ್ನು ಖಚಿತಪಡಿಸುವುದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ಇಂತಹ ಅಧಿಕಾರಗಳನ್ನು ನೀಡಲಾಗಿದೆ ಎಂದು ನ್ಯಾಯಾಲಯ ವಿವರಣೆ ನೀಡಿದೆ.

ದೆಹಲಿ ವಿಶೇಷ ಪೊಲೀಸ್ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಸಂಬಂಧಪಟ್ಟ ರಾಜ್ಯ ಸರಕಾರಗಳ ಪೂರ್ವಾನುಮತಿ ಇದ್ದರೆ ಮಾತ್ರ ಸಿಬಿಐ ತನಿಖೆ ನಡೆಸಬಹುದು ಎಂದು ವಾದಿಸಿ ಪಶ್ಚಿಮ ಬಂಗಾಲ ಸರಕಾರ ಮತ್ತು ಇತರ ಕೆಲವರು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ನೀಡಿದೆ.

ತೃಣಮೂಲ ಕಾಂಗ್ರೆಸ್‌ನ 11 ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2001ರಲ್ಲಿ ಕಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದ್ದನ್ನು ಪಶ್ಚಿಮ ಬಂಗಾಲ ಸರಕಾರ ಪ್ರಶ್ನಿಸಿತ್ತು. ಈ ತೀರ್ಪಿನೊಂದಿಗೆ ಇಂತಹ ಹಲವು ಪ್ರಕರಣಗಳಲ್ಲಿ ಹುಟ್ಟಿಕೊಂಡಿದ್ದ ಸಂಶಯಗಳು ಈಗ ನಿವಾರಣೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ