ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುದ್ಧ ಸಂತ್ರಸ್ತರಿಗೆ ಚಿಪ್ಪು, ಉಗ್ರರಿಗೆ ಪುನರ್ವಸತಿ: ಬಿಜೆಪಿ ಟೀಕೆ (BJP MLAs | Jammu | Union Home Minister | P. Chidambaram)
Bookmark and Share Feedback Print
 
1947 ಮತ್ತು 1965ರ ಯುದ್ಧಗಳಲ್ಲಿ ನಿರಾಶ್ರಿತರಾದವರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಬಗ್ಗೆ ಗಂಭೀರ ಯೋಚನೆ ಮಾಡದ ಸರಕಾರ, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು ಅಪ್ಪಿಕೊಂಡು ಸಹಾಯ ಮಾಡಲು ಹೊರಟಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಗಡಿ ನಿಯಂತ್ರಣ ರೇಖೆ ದಾಟಿ ಹೋಗಿ ಭಯೋತ್ಪಾದನಾ ಶಿಬಿರಗಳಿಗೆ ಸೇರಿಕೊಂಡು ತರಬೇತಿಗಳನ್ನು ಪಡೆದಿರುವ ಯುವಕರನ್ನು ಮರಳಿ ಕರೆಸಿಕೊಳ್ಳುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದಿರುವ ಜಮ್ಮು ಬಿಜೆಪಿ ವಕ್ತಾರ ಗುಪ್ತಾ, ಇದೇ ಕಾರಣದಿಂದ ಇಲ್ಲಿಗೆ ಆಗಮಿಸಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರಿಗೆ ಘೇರಾವ್ ಹಾಕಲು ಯೋಜನೆ ರೂಪಿಸಲಾಗಿತ್ತು ಎಂದರು.

ಆದರೆ ಭದ್ರತಾ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸುವ ಮೂಲಕ ನಮ್ಮ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಪ್ರತಿಭಟನೆ ನಡೆಸಲು ಸಾಕಷ್ಟು ಜನತೆ ಸೇರಿದ್ದರು ಎಂದು ಅವರು ತಿಳಿಸಿದ್ದಾರೆ.

ಭಯೋತ್ಪಾದಕರಿಗೆ ಶರಣಾಗತಿ ಪ್ರಸ್ತಾಪ ನೀಡುವುದು ಒಂದು ಬಹುದೊಡ್ಡ ಅಪಾಯಕಾರಿ ಹೆಜ್ಜೆ ಎಂದಿರುವ ಗುಪ್ತಾ, ಇದು ದೇಶದ ಭದ್ರತೆಯ ಮೇಲೆ ದೂರಗಾಮಿ ಪರಿಣಾಮ ಬೀಳಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಮರಳುವ ಭಯೋತ್ಪಾದಕರಿಗೆ ಪುನರ್ವಸತಿ ಕಲ್ಪಿಸುವ ಪ್ರಸ್ತಾಪವನ್ನು ವಿರೋಧಿಸಿ ಚಿದಂಬರಂ ಅವರಿಗೆ ಘೇರಾವ್ ಹಾಕಲೆತ್ನಿಸಿದ ಶಾಸಕರು ಸೇರಿದಂತೆ 250ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಕೇಂದ್ರ ಗೃಹಸಚಿವ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ವಿರುದ್ಧ ಇಂದು ಬೆಳಿಗ್ಗೆಯಿಂದಲೇ ಇಲ್ಲಿನ ಬಿಕ್ರಮ್ ಚೌಕ್‌ನಲ್ಲಿ ರಾಜ್ಯ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು.

ಆದರೆ ಭಾರೀ ಪೊಲೀಸ್ ಭದ್ರತೆಯೊಂದಿಗೆ ಇಲ್ಲಿಗೆ ಆಗಮಿಸಿದ್ದ ಗೃಹ ಸಚಿವರಿಗೆ ಘೇರಾವ್ ಹಾಕಲು ಬಿಜೆಪಿ ಕಾರ್ಯಕರ್ತರಿಗೆ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಚಮನ್ ಲಾಲ್ ಗುಪ್ತಾ, ಅಶೋಕ್ ಖಾಜೂರಿಯಾ, ಗಾರು ರಾಮ್, ಚೌದರಿ ಶ್ಯಾಮ್, ಜಗದೀಶ್ ರಾಜ್ ಸಪೋಲಿಯಾ, ಭರತ್ ಭೂಷಣ್ ಮತ್ತು ಬಲ್ದೇವ್ ರಾಜ್ ಎಂಬ ಬಿಜೆಪಿ ಶಾಸಕರೂ ಸೇರಿದಂತೆ ಸುಮಾರು 250 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತ ವಶದಲ್ಲಿರುವ ಕಾಶ್ಮೀರದಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭಾರತದ ವಿರುದ್ಧ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ದಶಕಗಳಿಂದ ವಲಸೆ ಹೋಗಿರುವ ಯುವಕರು ಮರಳಲು ಆಸಕ್ತರಾಗಿದ್ದು, ಈ ಸಂಬಂಧ ಹಲವು ಮೂಲಗಳ ಮೂಲಕ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಅವರು ಶರಣಾಗತಿಯಾಗುವುದಾದರೆ ಸೂಕ್ತ ನಿಯಮಗಳನುಸಾರ ಸ್ವೀಕರಿಸುವ ಕುರಿತು ಸರಕಾರಗಳು ಯೋಚನೆ ಮಾಡುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ