ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆಯದ್ದು ದೇಸೀ ಉಗ್ರರ ಕೃತ್ಯ; ಹೊರಗಿನವರ ನೇರ ಪಾಲಿಲ್ಲ?
(Pune blast | Lashkar-e-Taiba al Alami | Indian Mujahideen Kashmir | India)
ಪುಣೆ ಸ್ಫೋಟವನ್ನು ನಡೆಸಿದ್ದು ನಾವೇ ಎಂದು ಎರಡೆರಡು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಹೊಣೆ ಹೊತ್ತುಕೊಂಡಿದ್ದನ್ನು ಭಾರತೀಯ ತನಿಖಾದಳಗಳು ತಳ್ಳಿ ಹಾಕಿದ್ದು, ಇದು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಸಹಕಾರದಿಂದ ಕರ್ನಾಟಕ ಸೇರಿದಂತೆ ದೇಶೀಯ ದುಷ್ಕರ್ಮಿಗಳು ಎಸಗಿದ ಕೃತ್ಯವಾಗಿದೆ ಎಂದು ಹೇಳಿವೆ.
ಈಗಾಗಲೇ ಮುಂಬೈ, ಪುಣೆ, ಬೆಂಗಳೂರು, ಹಂಪಿ, ಭಟ್ಕಳ ಸೇರಿದಂತೆ ದೇಶದ ವಿವಿಧೆಡೆಗಳಿಂದ 40ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗುತ್ತಿದೆ. ಮಹತ್ವದ ಸುಳಿವುಗಳು ಲಭಿಸಿವೆ. ಶೀಘ್ರದಲ್ಲೇ ನಾವು ಪ್ರಕರಣವನ್ನು ಭೇದಿಸಲಿದ್ದೇವೆ ಎಂದು ಮಾಹಿತಿಗಳನ್ನು ಸಾಧ್ಯವಾದಷ್ಟು ಗೌಪ್ಯವಾಗಿಡುತ್ತಿರುವ ತನಿಖಾದಳಗಳು ಹೇಳಿಕೊಂಡಿವೆ.
ಪುಣೆಯ ಜರ್ಮನ್ ಬೇಕರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ನಾವೇ ಎಂದು ಹೇಳಿಕೊಂಡಿದ್ದ 'ಲಷ್ಕರ್ ಇ ತೋಯ್ಬಾ ಅಲ್ ಅಲಾಮಿ ಇಂಟರ್‌ನ್ಯಾಷನಲ್' ಮತ್ತು 'ಇಂಡಿಯನ್ ಮುಜಾಹಿದೀನ್ ಕಾಶ್ಮೀರ್' ಸಂಘಟನೆಗಳ ತಪ್ಪೊಪ್ಪಿಗೆಗಳಿಗೆ ಪ್ರತಿಕ್ರಿಯಿಸಿರುವ ಮೂಲಗಳು, 'ಇದು ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾತ್ರ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ' ಎಂದಿವೆ.
PTI
ಸಂಬಂಧಪಟ್ಟ ಎಲ್ಲಾ ಮೂಲಗಳನ್ನು ನಾವು ಪರಿಶೀಲನೆ ನಡೆಸಿದ್ದೇವೆ. ಆದರೆ ಪಾಕಿಸ್ತಾನ ಮೂಲದ ಸಂಘಟನೆಗಳ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ತನಿಖೆಯ ದೃಷ್ಟಿಯಿಂದ ಇಂತಹ ಹೇಳಿಕೆಗಳು ಮಹತ್ವದ್ದಲ್ಲ. ನೈಜ ಪಿತೂರಿದಾರರ ಕಡೆಗಿನ ತನಿಖೆಯನ್ನು ಮಂದಗೊಳಿಸುವ ಯತ್ನವಿದು ಎಂದು ತನಿಖಾದಳದ ಅಗ್ರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲಿಗೆ ಪುಣೆ ಸ್ಫೋಟ ನಡೆಸಿದ್ದು ನಾವೇ ಎಂದು ಹೇಳಿಕೊಂಡ 'ಇಂಡಿಯನ್ ಮುಜಾಹಿದೀನ್ ಕಾಶ್ಮೀರ್' ಎಂಬ ಸಂಘಟನೆಯ ಎಸ್ಎಂಎಸ್ ಸಂದೇಶವೊಂದು ಪಾಕಿಸ್ತಾನದ ಫೋನ್ ನಂಬರಿನಿಂದ ಮಾಧ್ಯಮ ಕಚೇರಿಯೊಂದಕ್ಕೆ ಬಂದಿತ್ತು. ನಂತರ 'ಲಷ್ಕರ್ ಇ ತೋಯ್ಬಾ ಅಲ್ ಅಲಾಮಿ ಇಂಟರ್‌ನ್ಯಾಷನಲ್' ಎಂಬ ಹೊಸ ಸಂಘಟನೆಯ ವಕ್ತಾರ ಎಂದು ಹೇಳಿಕೊಂಡು ಅಬೂ ಜಿಂದಾಲ್ ಎಂಬಾತ ಕರೆ ಮಾಡಿ, ತಾವೇ ದುಷ್ಕೃತ್ಯಕ್ಕೆ ಕಾರಣ ಎಂದು ಹೇಳಿಕೊಂಡಿದ್ದ.
ಪ್ರಾಥಮಿಕ ತನಿಖೆಯ ಪ್ರಕಾರ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ನೇರ ಪಾಲುದಾರಿಕೆ ಪುಣೆ ಸ್ಫೋಟದಲ್ಲಿ ಇದ್ದಂತಿಲ್ಲ. 'ಕರಾಚಿ ಪ್ರೊಜೆಕ್ಟ್' ಅಡಿಯಲ್ಲಿ ನಡೆಸಲಾಗಿರುವ ಕೃತ್ಯ ಇದೆಂದು ನಂಬಲಾಗಿದ್ದು, ಲಷ್ಕರ್ ಇ ತೋಯ್ಬಾ ಮತ್ತು ಇಂಡಿಯನ್ ಮುಜಾಹಿದೀನ್ ಸಂಘಟನೆಗಳ ಸಹಚರ ಪಾಕ್ ಮೂಲದ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿಯ ಹೆಜ್ಜೆ ಗುರುತುಗಳು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿವೆ.
ಲಷ್ಕರ್ ಇ ತೋಯ್ಬಾ ಮತ್ತು ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆಗಳು ಇಂಡಿಯನ್ ಮುಜಾಹಿದೀನ್ ಜತೆ ಸೇರಿಕೊಂಡು 'ಕರಾಜಿ ಪ್ರೊಜೆಕ್ಟ್' ಎಂಬ ಭಾರತ ವಿರುದ್ಧದ ಕುಕೃತ್ಯ ನಡೆಸಲು ಯೋಜನೆ ರೂಪಿಸಿದ್ದವು. ಇದರ ಪ್ರಕಾರ ಭಾರತದಿಂದಲೇ ಯುವಕರನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಅವರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಿ ನಂತರ ತವರಿಗೆ ಮರಳಿಸಲಾಗುತ್ತದೆ. ಈ ಜಿಹಾದಿಗಳು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ನೀಡುವ ಆದೇಶಗಳನ್ನು ಪಾಲಿಸುತ್ತಾರೆ.
ಕರ್ನಾಟಕಕ್ಕಿದೆ ಪ್ರಬಲ ನಂಟು... ಮಹಾರಾಷ್ಟ್ರದ ಕೆಲವು ವ್ಯಕ್ತಿಗಳ ಜತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಇತರರ ಸಹಕಾರದಿಂದ ಪುಣೆ ಸ್ಫೋಟ ನಡೆಸಲಾಗಿದೆ ಎಂಬ ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು, ಭಟ್ಕಳ, ಹಂಪಿಗಳಿಂದ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹಂಪಿಯ ವಿರೂಪಾಪುರ ಗಡ್ಡೆ ಪ್ರದೇಶದಲ್ಲಿ ಆಟಿಕೆ ಮಾರುವ ನಾಟಕವಾಡುತ್ತಿದ್ದ ನಾಲ್ವರು ಕಾಶ್ಮೀರಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರಿಗಾಗಿ ಇಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಇನ್ನುಳಿದಂತೆ ಬೆಂಗಳೂರು ಹಾಗೂ ಭಟ್ಕಳಗಳಿಂದಲೂ ಕೆಲವರನ್ನು ವಿಚಾರಣೆ ನಡೆಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆಯಾದರೂ, ಹೆಚ್ಚಿನ ಮಾಹಿತಿಗಳನ್ನು ನೀಡಲು ನಿರಾಕರಿಸಿವೆ.
ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಸದಸ್ಯರಾದ ಉತ್ತರ ಕನ್ನಡ ಜಿಲ್ಲೆಯ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಅವರು ಪುಣೆ ಸ್ಫೋಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಜಾಡುಗಳನ್ನು ಕೂಡ ಪತ್ತೆ ಹಚ್ಚಲು ತನಿಖಾ ದಳಗಳು ಪ್ರಯತ್ನಿಸುತ್ತಿವೆ. ಅವರ ಜತೆ ಸಂಬಂಧ ಹೊಂದಿದ್ದ ನಾಲ್ಕು ಮಂದಿಯನ್ನು ಕಳೆದೆರಡು ದಿನಗಳ ಹಿಂದೆ ಪುಣೆ ಮತ್ತು ಔರಂಗಾಬಾದ್‌ಗಳಿಂದ ಪೊಲೀಸರು ಬಂಧಿಸಿದ್ದರು. ಭಟ್ಕಳದಿಂದಲೂ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.