ಒಂದು ನಾಯಿಯ ಒಂದು ರಾತ್ರಿಗೆ 60,000 ರೂಪಾಯಿಯೆಂಬುದು ಅಚ್ಚರಿಯಾದರೂ ವಾಸ್ತವ ಸಂಗತಿ. ಚಂಡೀಗಢದಲ್ಲಿನ ಶ್ವಾನಪ್ರಿಯರೊಬ್ಬರ ಬಳಿ ಇರುವ ಅಪರೂಪದ ಗಂಡು ನಾಯಿಯ ಜತೆ ಹೆಣ್ಣು ನಾಯಿಯ ಮಿಲನಕ್ಕೆ ಅವರು ವಿಧಿಸುವ ಶುಲ್ಕವಿದು.
ಕೆನಡಾದಲ್ಲಿ 'ನ್ಯೂ ಫೌಂಡ್ಲೆಂಡ್ ತಳಿ' ಎಂದು ಹೆಸರಿಸಲಾಗಿರುವ ಈ ನಾಯಿ ಚಂಡೀಗಢದಲ್ಲಿ ಇತ್ತೀಚೆಗಷ್ಟೇ ನಡೆದ 'ಶ್ವಾನ ಪ್ರದರ್ಶನ'ದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಈ ಸಂದರ್ಭದಲ್ಲಿ ಈ ಅಪರೂಪದ ಹಾಗೂ ದೃಢಕಾಯದ ಗಂಡು ನಾಯಿಯ ಮಾಲಕ ಅದರ ಜತೆಗಿನ ಒಂದು ಬಾರಿಯ ಮಿಲನವನ್ನು 60,000 ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ.
ನೋಡುವಾಗ ಕರಡಿಯಿಂತೆ ಕಾಣುವ 'ನ್ಯೂ ಫೌಂಡ್ಲೆಂಡ್' ತಳಿಯ ಈ ನಾಯಿಯ ಹೆಸರು 'ಟೀನ್' ಎಂದು. ಅದರ ಜತೆಗಾತಿ 'ಬೆಬೋ'. 'ಕೆನೆಲ್ ಕ್ಲಬ್ ಆಫ್ ಇಂಡಿಯಾ'ದ ಆಶ್ರಯದಲ್ಲಿ 'ಚಂಡೀಗಢ ಕೆನೆಲ್ ಕ್ಲಬ್' ಆಯೋಜಿಸಿದ ಈ ಶ್ವಾನ ಪ್ರದರ್ಶನದಲ್ಲಿ ಇವೆರಡೂ ನಾಯಿಗಳು ಕೇಂದ್ರ ಬಿಂದುವಾಗಿದ್ದವು. ಕೊನೆಗೆ ಇವೆರಡೂ ನಾಯಿಗಳು ಟ್ರೋಫಿಯನ್ನೂ ಗೆದ್ದುಕೊಂಡಿವೆ.
ಶ್ವಾನ ಪ್ರಿಯರಾಗಿರುವ ಹರ್ಯಾಣದ ಕರ್ನಲ್ ನಿವಾಸಿ ಹಾಗೂ ಈ ಅಪರೂಪದ ತಳಿಯ ನಾಯಿಯ ಮಾಲಕರಾಗಿರುವ ರಾಕೇಶ್ ವರ್ಮಾ ಒಂದು ಗರ್ಭಿಣಿ ನಾಯಿ ಸೇರಿದಂತೆ ಎರಡು ನಾಯಿಗಳನ್ನು ಬ್ರಿಟನ್‌ನಿಂದ ತಂದಿದ್ದರು. 'ಟೀನ್' ಈಗ ವಯಸ್ಸಿಗೆ ಬಂದಿದ್ದು, ಮಿಲನಕ್ಕೆ ಅರ್ಹವಾಗಿದೆ ಎಂದು ಅಂತಾರಾಷ್ಟ್ರೀಯ ನಾಯಿಗಳ ಕ್ಲಬ್‌ನಿಂದ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದೆ.
ಈ ಪ್ರದರ್ಶನಕ್ಕೆ ತನ್ನ ನಾಯಿಗಳನ್ನು ಕರೆ ತಂದಿದ್ದ ವರ್ಮಾರವರು, ಟೀನ್ ಜತೆ ಮಿಲನ ಹೊಂದಲು 60,000 ರೂಪಾಯಿಗಳನ್ನು ನಿಗದಿಪಡಿಸಿದ್ದರು. ಅಲ್ಲದೆ ಕೇವಲ ಅಪ್ಪಟ ತಳಿಗಳ ನಾಯಿಗಳೊಂದಿಗೆ ಮಾತ್ರ ಮಿಲನಕ್ಕೆ ಅವಕಾಶ ನೀಡುತ್ತಿದ್ದರು.
ಟೀನ್ ಮತ್ತು ಬೆಬೋ ಕುನ್ನಿಗಳು ಕೂಡ ದುಬಾರಿ ಬೆಲೆಗೆ ಇಲ್ಲಿ ಮಾರಾಟವಾಗಿವೆ. 'ಸಾಮಾನ್ಯವಾಗಿ ಗಂಡು ನಾಯಿಗಳ ಮಾಲಕರು ಕುನ್ನಿಗಳನ್ನು ಮಾರಾಟ ಮಾಡುವ ಬೆಲೆಯನ್ನು ಮಿಲನಕ್ಕೂ ವಿಧಿಸುತ್ತಾರೆ. ಆದರೆ ನ್ಯೂ ಫೌಂಡ್ಲೆಂಡ್ ಮರಿಗಳು ಒಂದು ಲಕ್ಷ ರೂಪಾಯಿಗಳಿಗೆ ಮಾರಾಟವಾದರೂ ನಾನು ಕೇವಲ 60,000 ರೂಪಾಯಿಯನ್ನಷ್ಟೇ ವಿಧಿಸುತ್ತಿದ್ದೇನೆ' ಎನ್ನುತ್ತಾರೆ ವರ್ಮಾ.
ನಾಯಿಗಳ ಬಗ್ಗೆ ಆಸಕ್ತನಾಗಿದ್ದ ನಾನೀಗ ವೃತ್ತಿಪರನಾಗಿದ್ದು, ಹಣವನ್ನೂ ಗಳಿಸುತ್ತಿದ್ದೇನೆ ಎನ್ನುವ ಅವರು ಈ ತಳಿಯ ವಿವರಣೆ ನೀಡುತ್ತಾರೆ.
ತಜ್ಞರ ಪ್ರಕಾರ ಈ ತಳಿಯ ನಾಯಿಗಳಲ್ಲಿ ಕಪ್ಪು ಬಣ್ಣದ್ದು ಹೆಚ್ಚು ಜನಪ್ರಿಯವಾಗಿವೆ. ಸುಮಾರು 70 ಕೇಜಿಯಿಂದ 120 ಕೇಜಿಗಳಷ್ಟು ತೂಗುವ ಈ ತಳಿಯ ನಾಯಿ, ಮೂಗಿನಿಂದ ಬಾಲದವರೆಗೆ ಇದರ ಉದ್ದ ಆರು ಅಡಿ ಹೊಂದಿರುತ್ತದೆ.