ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರೀಕ್ಷಾ ಹಾಲ್‌ಗೆ ವಾಚ್, ಶೂ, ಸಾಕ್ಸ್, ಬೆಲ್ಟ್ ತರುವಂತಿಲ್ಲ!
(shoes, belts, socks, exam hall, Students, Tamil Nadu, examinations, Mobile, India)
ಪರೀಕ್ಷಾ ಹಾಲ್‌ಗೆ ವಾಚ್, ಶೂ, ಸಾಕ್ಸ್, ಬೆಲ್ಟ್ ತರುವಂತಿಲ್ಲ!
ಚೆನ್ನೈ, ಗುರುವಾರ, 18 ಫೆಬ್ರವರಿ 2010( 12:22 IST )
ಪರೀಕ್ಷಾ ಕೊಠಡಿಗೆ ಶೂ-ಸಾಕ್ಸ್ ಹಾಕಿಕೊಂಡು ಬರುವಂತಿಲ್ಲ, ಸೊಂಟಕ್ಕೆ ಬೆಲ್ಟ್ ಕೂಡ ಕಟ್ಟಬಾರದು. ಅಷ್ಟೇ ಅಲ್ಲ ಆಧುನಿಕ ರಿಸ್ಟ್ ವಾಚುಗಳನ್ನೂ ಒಯ್ಯಬಾರದು ಎಂದು ತಮಿಳುನಾಡು ರಾಜ್ಯ ಪದವಿಪೂರ್ವ ಪರೀಕ್ಷಾ ಮಂಡಳಿ ಹೊಸ ನಿಬಂಧನೆಗಳನ್ನು ಜಾರಿಗೆ ತಂದಿದೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ವಿವಿಧ ತಂತ್ರಗಳನ್ನು ಬಳಸುತ್ತಿರುವುದನ್ನು ಪತ್ತೆ ಹಚ್ಚಿರುವ ಶಿಕ್ಷಣ ತಜ್ಞರು ಇವುಗಳನ್ನು ತಡೆದು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಇಂತಹ ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ.
WD
2010ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಪದವಿಪೂರ್ವ ಪರೀಕ್ಷೆಯ ಕೈಪಿಡಿ ಬಿಡುಗಡೆ ಮಾಡಿರುವ ಪರೀಕ್ಷಾ ನಿರ್ದೇಶನಾಲಯವು ಕೊಠಡಿಯ ಮೇಲ್ವಿಚಾರಕರಿಗೆ ಕಠಿಣ ಸೂಚನೆಗಳನ್ನು ರವಾನಿಸಿದೆ. ಅದರ ಪ್ರಕಾರ ಶೂಗಳು, ಸಾಕ್ಸ್‌ಗಳು, ಬೆಲ್ಟ್‌ಗಳು, ರಿಸ್ಟ್ ವಾಚ್‌ಗಳು, ಮೊಬೈಲ್ ಫೋನ್‌ಗಳು, ಕ್ಯಾಲ್ಕ್ಯುಲೇಟರ್ ಮತ್ತು ಯಾವುದೇ ರೀತಿಯ ಪತ್ರ ಅಥವಾ ಚೀಟಿಗಳನ್ನು ಪರೀಕ್ಷಾ ಹಾಲ್‌ನ ಒಳಗೆ ವಿದ್ಯಾರ್ಥಿಗಳು ತರುವುದು ನಿಷಿದ್ಧ.
ವಿದ್ಯಾರ್ಥಿಗಳು ಪೂರಕ ಮಾಹಿತಿಗಳನ್ನು ಬರೆದುಕೊಂಡ ಚೀಟಿಗಳನ್ನು ಶೂ ಅಥವಾ ಕಾಲ್ಚೀಲದೊಳಗೆ ತುರುಕಿಕೊಂಡು ಬರುತ್ತಿರುವುದು ಸಾಮಾನ್ಯವಾಗುತ್ತಿದೆ. ಕೆಲವರು ಬೆಲ್ಟ್‌ನ ಎಡೆಯಲ್ಲಿ ಕೂಡ ಇಟ್ಟುಕೊಂಡಿರುತ್ತಾರೆ. ಇದನ್ನೆಲ್ಲ ಪರಿಶೀಲನೆ ನಡೆಸುವುದು ಕಷ್ಟ. ಹಾಗಾಗಿ ಇಂತಹ ವಸ್ತುಗಳಿಗೆ ಪರೀಕ್ಷಾ ಹಾಲ್‌ನಲ್ಲಿ ನಿಷೇಧ ಹೇರುತ್ತಿದ್ದೇವೆ ಎಂದು ಸರಕಾರದ ಪರೀಕ್ಷಾ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಟ್ಟೆಯೊಳಗೆ ಚೀಟಿಗಳು ಅಥವಾ ಬರಹಗಳನ್ನು ಅಡಗಿಸಿಕೊಂಡು ಬಂದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, 'ಇದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಯಾಕೆಂದರೆ ಅವರು ಚೀಟಿಯನ್ನು ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ಬರದಂತೆ ಹೊರ ತೆಗೆಯುವುದು ಕಷ್ಟ' ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.