ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡೋದೇ ಉಗ್ರರ ಗುರಿ: ಶಿವಸೇನೆ
ಮುಂಬೈ, ಗುರುವಾರ, 18 ಫೆಬ್ರವರಿ 2010( 13:17 IST )
ಪಾಕಿಸ್ತಾನದ ಮಿಲಿಟರಿ ಮತ್ತು ಸರಕಾರದ ಸಹಕಾರದಿಂದ ಭಯೋತ್ಪಾದಕರು ಭಾರತದ ಹಿಂದೂಗಳನ್ನು ನಿರಾಶ್ರಿತರನ್ನಾಗಿ ಮಾಡಿ ಇಲ್ಲಿ ಮುಸ್ಲಿಂ ರಾಷ್ಟ್ರವನ್ನು ಸ್ಥಾಪಿಸುವುದೇ ಅವರ ಉದ್ದೇಶ ಎಂದಿರುವ ಶಿವಸೇನೆ, ಪುಣೆ ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನವೇ ಹೊಣೆ ಎಂದು ದೂರಿದೆ.
ಫೆಬ್ರವರಿ 13ರಂದು ಪುಣೆಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ಕುರಿತು ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಪಾಕಿಸ್ತಾನವನ್ನೇ ಹೊಣೆಗಾರನನ್ನಾಗಿ ಮಾಡಿರುವ ಶಿವಸೇನೆ, ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇಸ್ಲಾಮಿಕ್ ಭಯೋತ್ಪಾದನೆಯೆಂಬ ಭೂತವು ಮತ್ತೆ ಮೈಕೊಡವಿ ನಿಂತಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ಶಿವಸೇನೆ, ದೇಶವು ಇದನ್ನು ಮಟ್ಟ ಹಾಕಲು ಪೂರ್ವತಯಾರಿ ನಡೆಸಿದೆಯೇ ಎಂದು ಪ್ರಶ್ನಿಸಿದೆ.
ಪುಣೆ ಸ್ಫೋಟದ ಹೊಣೆ ಹೊತ್ತುಕೊಂಡಿರುವ ಪಾಕಿಸ್ತಾನದ ಸಂಘಟನೆಗಳನ್ನು ಉಲ್ಲೇಖಿಸುತ್ತಾ, 'ಇದಕ್ಕೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ. ಭಯೋತ್ಪಾದನಾ ಸಂಘಟನೆಗಳು ಪಾಕಿಸ್ತಾನದ ಮಿಲಿಟರಿಯ ಒಂದು ಭಾಗವಾಗಿದ್ದು, ಉಗ್ರರಿಗೆ ಸೇನೆಯ ಶಿಬಿರಗಳಲ್ಲೇ ತರಬೇತಿ ನೀಡಲಾಗುತ್ತಿದೆ. ಅವರ ಗುರಿಯಿರುವುದು ಹಿಂದೂಗಳನ್ನು ನಾಶ ಮಾಡುವುದು ಮತ್ತು ಇಲ್ಲಿ ಮುಸ್ಲಿಂ ಸರಕಾರವನ್ನು ಸ್ಥಾಪಿಸುವುದು ಎಂದಿದೆ.
ಅಲ್‌ಖೈದಾದ ಜತೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಂಘಟನೆ 'ಹುಜಿ'ಯು -- ಹಾಕಿ ವಿಶ್ವಕಪ್, ಐಪಿಎಲ್-3, ಕಾಮನ್‌ವೆಲ್ತ್ ಗೇಮ್ಸ್, ಕ್ರಿಕೆಟ್ ವಿಶ್ವಕಪ್ ಭಾರತ ಪ್ರವಾಸ ಮಾಡುವ ವಿದೇಶಿ ಆಟಗಾರರಿಗೆ ಬೆದರಿಕೆ ಹಾಕಿರುವುದನ್ನು ಪ್ರಸ್ತಾಪಿಸಿರುವ ಪತ್ರಿಕೆ, 'ಹಾಗೆ ಮಾಡಿದಲ್ಲಿ ಹುಜಿಯನ್ನು ತಡೆಯುವವರು ಯಾರು? ಮೊನ್ನೆ ಪುಣೆ ಸ್ಫೋಟದಿಂದಲೇ ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬುದುವುದು ರುಜುವಾತಾಗಿದೆ' ಎಂದು ಸರಕಾರಗಳ ಬಗ್ಗೆ ವ್ಯಂಗ್ಯವಾಡಿದೆ.
ಅಮೆರಿಕಾದ ಗುಪ್ತಚರ ಇಲಾಖೆಗಳು ಮತ್ತು ಭಾರತೀಯ ಬೇಹುಗಾರಿಕಾ ಏಜೆನ್ಸಿಗಳು ಪುಣೆ ಮೇಲೆ ಇಂತಹ ಸಂಭಾವ್ಯ ದಾಳಿಗಳು ನಡೆಯುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದ್ದ ಹೊರತಾಗಿಯೂ ಮಹಾರಾಷ್ಟ್ರ ಪೊಲೀಸರು 'ರಾಜಕುಮಾರ' ರಾಹುಲ್ ಗಾಂಧಿ ಮತ್ತು ಶಾರೂಖ್ ಖಾನ್ ಸಿನಿಮಾಗಳಿಗೆ ಭದ್ರತೆ ನೀಡುವಲ್ಲಿ ಬ್ಯುಸಿಯಾಗಿದ್ದವು ಎಂದು ಶಿವಸೇನೆ ವಿಶ್ಲೇಷಣೆ ನಡೆಸಿದೆ.
ಹೆಡ್ಲಿ ಜರ್ಮನ್ ಬೇಕರಿ ಪಕ್ಕ ಭೇಟಿ ನೀಡಿದ್ದ ವಿಚಾರವೂ ನಮಗೆ ಗೊತ್ತಿತ್ತು. ದಾಳಿಯನ್ನು ತಡೆಯಲು ನಮ್ಮಿಂದ ಸಾಧ್ಯವಾಯಿತೇ? ಅದರ ಬದಲು ಹುಜಿ ಮತ್ತಷ್ಟು ಪ್ರಬಲವಾಗಲು ಇದರಿಂದ ಸಹಕಾರವಾಯಿತು. ಇದಕ್ಕೆಲ್ಲ ಗಮನ ಕೊಡುವ ಬದಲು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅವರು ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳು ಹಣ ಮಾಡುವ ವೇದಿಕೆ ಐಪಿಎಲ್-3ಗೆ ಭದ್ರತೆ ಒದಗಿಸಲು ಮಾತ್ರ ಆಸಕ್ತಿ ವಹಿಸಿದ್ದರು ಎಂದು ತರಾಟೆಗೆ ತೆಗೆದುಕೊಂಡಿದೆ.