ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ತನ್ನ ಗತಕಾಲದ ಧ್ಯೇಯವನ್ನು ಪುನರುಚ್ಛರಿಸಿರುವ ಬಿಜೆಪಿ, ಮುಸ್ಲಿಮರು ಹಿಂದೂಗಳ ಭಾವನೆಗಳತ್ತ ಉದಾರಿಗಳಾಗುವ ಮೂಲಕ 'ಸೂಕ್ತ ಪರಿಹಾರ'ಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇಂದೋರ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಅಧ್ಯಕ್ಷ ನಿತಿನ್ ಗಡ್ಕರಿ, 'ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಿಸಬೇಕೆಂಬ ನಿಲುವಿಗೆ ಬಿಜೆಪಿ ಸಂಪೂರ್ಣ ಬದ್ಧವಾಗಿದೆ. ಈ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ, ಆದರೆ ಅಲ್ಲಿಂದ ಸೂಕ್ತ ಪರಿಹಾರ ಸಿಗುವುದು ಕಷ್ಟಕರ. ಯಾಕೆಂದರೆ ಒಂದು ಪಕ್ಷ ಗೆದ್ದರೆ, ಮತ್ತೊಂದು ಪಕ್ಷವು ಸೋಲಬೇಕಾಗುತ್ತದೆ' ಎಂದರು.
ಹಿಂದೂಗಳ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯವು ಉದಾರಿಗಳಾಗುವ ಮೂಲಕ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಮುಸ್ಲಿಮರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಬಹುಜನರ ಅಪೇಕ್ಷೆಯಂತೆ ಈ ಮಂದಿರ ನಿರ್ಮಾಣಕ್ಕೆ ಮುಸ್ಲಿಮ್ ಸಮುದಾಯವು ಒಪ್ಪಿಗೆ ಸೂಚಿಸಿದಲ್ಲಿ ಅದು ಸ್ನೇಹದ ನೂತನ ಹರಿಕಾರನೆನಿಸಿಕೊಳ್ಳಲಿದ್ದು, ಸದೃಢ ಭಾರತಕ್ಕೆ ಚೈತನ್ಯ ತುಂಬಿ ಬಲಯುತಗೊಳಿಸಲು ಬದ್ಧವಾದಂತಾಗುತ್ತದೆ ಎಂದು ಗಡ್ಕರಿ ಒತ್ತಿ ಹೇಳಿದರು.
ಸತತ ಎರಡು ಚುನಾವಣೆಗಳಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಸಂಘ ಪರಿವಾರದ ಪ್ರಮುಖ ಸಿದ್ಧಾಂತಗಳಿಗೆ ಬಿಜೆಪಿ ಮರುಳುವ ಸ್ಪಷ್ಟ ಸಂಕೇತಗಳನ್ನು ನೀಡುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಆರೆಸ್ಸೆಸ್ ಅಭ್ಯರ್ಥಿ ಗಡ್ಕರಿಯವರನ್ನು ಪರಿಗಣಿಸಲಾಗಿತ್ತು.
ಕ್ಷಮೆ ಯಾಚಿಸಿದ ರಾಜನಾಥ್.... ತನ್ನ ಅಧಿಕಾರಾವಧಿಯಲ್ಲಿ ಪಕ್ಷದ ಕೆಲವು ಮುಖಂಡರಿಗೆ ನೋವುಂಟು ಮಾಡಿರುವುದಕ್ಕೆ ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಕ್ಷಮೆ ಯಾಚಿಸಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಅವರು, ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಕೆಲವು ತಪ್ಪುಗಳನ್ನು ಮಾಡಿರಬಹುದು. ನನ್ನಿಂದ ನೋವುಂಡವರಲ್ಲಿ ಈ ಮೂಲಕ ನಾನು ಕ್ಷಮೆ ಯಾಚಿಸುತ್ತಿದ್ದೇನೆ ಎಂದರು.
ತಾನು ಪಕ್ಷದ ಮುಖಂಡನಾದ ಬಳಿಕ ಗುಜರಾತ್, ಛತ್ತೀಸ್‌ಗಢ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಅಲ್ಲದೆ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಆ ಮೂಲಕ ಬಿಜೆಪಿ ಕೇವಲ ಹಿಂದಿಯವರ ಪಕ್ಷ ಎಂಬ ಕಲ್ಪನೆಯನ್ನು ಹುಸಿಗೊಳಿಸಿದೆ ಎಂದ ರಾಜನಾಥ್, ಆದರೂ ನನ್ನ ಅವಧಿಯಲ್ಲಿ ಎಲ್.ಕೆ. ಅಡ್ವಾಣಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಅಸಾಧ್ಯವಾಗಿರುವ ನೋವು ಹೃದಯದಲ್ಲೇ ಇದೆ. ಇದು ನನ್ನ ಕನಸಾಗಿತ್ತು, ಆದರೆ ಅದನ್ನು ನನಸು ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಪಶ್ಚಾತಾಪಪಟ್ಟರು.