ಸುಲ್ತಾನಪುರ, ಶುಕ್ರವಾರ, 19 ಫೆಬ್ರವರಿ 2010( 11:38 IST )
PR
ಪೊಲೀಸರ ಕ್ರೌರ್ಯಗಳು ಹೊಸತಲ್ಲವಾದರೂ ವೀಡಿಯೋ ಕ್ಯಾಮರಾಗಳ ಕಾರಣಗಳಿಂದಾಗಿ ಹೆಚ್ಚೆಚ್ಚು ಬಹಿರಂಗವಾಗುತ್ತಿವೆ. ಇದಕ್ಕೆ ಇತ್ತೀಚಿನ ಸೇರ್ಪಡೆ ದಲಿತ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ದಲಿತೆ ಯುವತಿಯೊಬ್ಬಳ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬ ಹಿಗ್ಗಾಮುಗ್ಗಾ ಥಳಿಸಿರುವುದು.
ಹವ್ಯಾಸಿ ಪತ್ರಕರ್ತನೊಬ್ಬ ಈ ದೃಶ್ಯವನ್ನು ತನ್ನ ವೀಡಿಯೋ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದ. ವಾರ್ತಾವಾಹಿನಿಗಳು ಇದನ್ನು ನಿರಂತರ ಬಿತ್ತರ ಮಾಡುತ್ತಿದ್ದಂತೆ ಸಂಬಂಧಪಟ್ಟವರು ಅತ್ಯುತ್ತಮ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದ ಆರೋಪಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದರು. ಆದರೆ ಇದೀಗ ಕೆಲಸದಿಂದ ಖಾಯಂ ಆಗಿ ವಜಾಗೊಳಿಸಲಾಗಿದೆ.
ಆಕೆ ಗಂಡನನ್ನೇ ಮುಗಿಸಿದ್ದವಳು... ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿನ ಮನ್ಯಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಗಂಡ ದೀಪಕ್ ಕಪೂರ್ ಎಂಬಾತನನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾಳೆ ಎಂದು ಆತನ ತಾಯಿ ದೂರು ನೀಡಿದ ನಂತರ ಪತ್ನಿ ಸಂಗೀತಾಳನ್ನು ಪೊಲೀಸರು ಬಂಧಿಸಿದ್ದರು.
ದಲಿತ ಯುವತಿ 26ರ ಹರೆಯದ ಸಂಗೀತಾ ತಾನು ಗಂಡ ಮಲಗಿ ನಿದ್ದೆ ಮಾಡುತ್ತಿದ್ದಾಗ ಕತ್ತು ಹಿಸುಕಿ ಕೊಂದಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ ನಂತರವೂ ಆಕೆಯನ್ನು ಪೊಲೀಸರು ಹೀನಾಯವಾಗಿ ಅಮಾನವೀಯ ರೀತಿಯಿಂದ ನಡೆಸಿಕೊಂಡಿದ್ದರು.
ಪೊಲೀಸ್ ಠಾಣೆಯ ಹೊರಗಡೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಇನ್ಸ್‌ಪೆಕ್ಟರ್ ಕೈಲಾಸ್ ನಾಥ್ ದುಬೇ ಕುರ್ಚಿಯಲ್ಲಿ ಕುಳಿತಿದ್ದ. ಈ ಸಂದರ್ಭದಲ್ಲಿ ಆತ ಪ್ರಕರಣವನ್ನು ವಿವರಿಸುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ಮಹಿಳೆಯ ಕಪಾಳಕ್ಕೆ ಬಾರಿಸಿದ್ದಾನೆ. ಈ ಹೊತ್ತಿಗೆ ಮಹಿಳೆಯ ದುಪ್ಪಟ್ಟಾ ಈತನ ಕೈಯಲ್ಲೇ ಬಂದಿತ್ತು. ನಂತರ ಎದ್ದು ನಿಂತು ದುಪ್ಪಟ್ಟಾವನ್ನು ಆಕೆಗೆ ಹೊದಿಸಿ ನೆಲಕ್ಕೆ ಬಗ್ಗಿ ಹಿಡಿದು ಮನಬಂದಂತೆ ಥಳಿಸಿದ್ದಾನೆ.
ಈ ಹೊತ್ತಿಗೆ ಪಕ್ಕದಲ್ಲೇ ಓರ್ವ ಮಹಿಳಾ ಪೊಲೀಸ್ ನಿಂತುಕೊಂಡಿದ್ದರೂ ಇನ್ಸ್‌ಪೆಕ್ಟರ್ ದುಂಡಾವರ್ತನೆಯನ್ನು ತಡೆದಿರಲಿಲ್ಲ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾ ಸುಲ್ತಾನಪುರ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ವೀರ್ ಸಿಂಗ್, ಆಕೆ ಇನ್ಸ್‌ಪೆಕ್ಟರ್ ಆಧೀನ ಅಧಿಕಾರಿಯಾಗಿರುವ ಕಾರಣ ಏನೂ ಮಾಡುವಂತಿರಲಿಲ್ಲ ಎಂದಿದ್ದಾರೆ.
ಇನ್ಸ್‌ಪೆಕ್ಟರ್ ದುಬೇಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಘಟನೆಯನ್ನು ಖಂಡಿಸಿರುವ ಎಸ್‌ಪಿ, 'ಇಂತಹ ಘಟನೆ ನಡೆಯಬಾರದಿತ್ತು. ಈಗಾಗಲೇ ಮಹಿಳೆ ತಾನೇ ಗಂಡನನ್ನು ಕೊಂದಿರುವುದಾಗಿ ತಪ್ಪೊಪ್ಪಿಗೆ ನೀಡಿದ್ದಾಳೆ. ಈ ರೀತಿ ಅಮಾನವೀಯವಾಗಿ ಮಹಿಳೆಯನ್ನು ಥಳಿಸುವ ಅಗತ್ಯವಿರಲಿಲ್ಲ' ಎಂದಿದ್ದಾರೆ.
ಇನ್ಸ್‌ಪೆಕ್ಟರ್ ಎಸಗಿರುವುದು ಕ್ರೌರ್ಯ. ತಪ್ಪಿತಸ್ಥನೆಂದು ಪರಿಗಣಿಸಿರುವ ನಾವು ಆತನನ್ನು ಅಮಾನತಿನಲ್ಲಿಟ್ಟಿದ್ದೇವೆ. ಆತನ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತದೆ. ನಂತರ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಎಸ್‌ಪಿ ಸಿಂಗ್ ತಿಳಿಸಿದ್ದಾರೆ.
ಇದು ರಾಜಕೀಯ ವಲಯದಲ್ಲೂ ತೀವ್ರ ವಿವಾದವಾಗುತ್ತಿದ್ದಂತೆ ಇನ್ಸ್‌ಪೆಕ್ಟರ್ ದುಬೇಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.