ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆತ 15ರ ವಿದ್ಯಾರ್ಥಿ, ಆಕೆ 21ರ ಶಿಕ್ಷಕಿ; ಈಗ ಗಂಡ-ಹೆಂಡತಿ..!
(Hyderabad teen | student | female teacher | Andhra Pradesh)
ಆತ 15ರ ವಿದ್ಯಾರ್ಥಿ, ಆಕೆ 21ರ ಶಿಕ್ಷಕಿ; ಈಗ ಗಂಡ-ಹೆಂಡತಿ..!
ಹೈದರಾಬಾದ್, ಶುಕ್ರವಾರ, 19 ಫೆಬ್ರವರಿ 2010( 12:28 IST )
WD
ಗುರುವಿಲ್ಲದೆ ಕಲಿಯುವ 'ವಿದ್ಯೆ'ಯನ್ನು ಸ್ವತಃ ಪಾಠ ಹೇಳುವ ಗುರುವಿನ ಮೇಲೆ ಪ್ರಯೋಗಿಸಿದ ಹುಡುಗ ಹತ್ತನೇ ತರಗತಿ ವಿದ್ಯಾರ್ಥಿ ಯಶಸ್ವಿಯಾಗಿದ್ದಾನೆ. ಇಬ್ಬರ ಸರಸ-ಸಲ್ಲಾಪವು ಓಡಿ ಹೋಗಿ ಮದುವೆಯಾಗುವರೆಗೆ ಮುಂದುವರಿದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ.
ಆಂಧ್ರಪ್ರದೇಶದ ವಾರಂಗಲ್‌ನಲ್ಲಿನ ಖಾಸಗಿ ಶಾಲೆಯ 15ರ ಹರೆಯದ ವಿದ್ಯಾರ್ಥಿ ತನ್ನದೇ ಶಾಲೆಯ ಶಿಕ್ಷಕಿಯಲ್ಲಿ ಅನುರಕ್ತನಾಗಿದ್ದ. ಬಾಲಕನ ಪ್ರೇಮಕ್ಕೆ ಮನಸೋತ ಟೀಚರ್ ಕೂಡ ಆತನ ಜತೆ ಪ್ರೇಮಸಲ್ಲಾಪಕ್ಕೆ ಸಹಕರಿಸಿದ್ದಳು. ಇದೆಲ್ಲ ಹೊರಜಗತ್ತಿಗೆ ಸರಿಯಾಗಿ ತಿಳಿಯುವಾಗ ಇಬ್ಬರೂ ಪರಾರಿಯಾಗಿ ಮದುವೆ ಮಾಡಿಕೊಂಡಿದ್ದರು.
ಹುಡುಗನ ಜತೆ ಶಿಕ್ಷಕಿ ಪರಾರಿಯಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿರುವ ಆತನ ಹೆತ್ತವರು, ಮಗನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಠಾಣೆಯಲ್ಲಿ ಇದುವರೆಗೆ ಪ್ರಕರಣ ದಾಖಲಿಸಲಾಗಿಲ್ಲ ಎಂದು ಮೂಲಗಳು ಹೇಳಿವೆ.
ನನಗೆ ನನ್ನ ಮಗ ಬೇಕು. ಈ ಮದುವೆಯನ್ನು ನಾನು ಒಪ್ಪಿಕೊಳ್ಳಲಾರೆ ಎಂದು ವಿವಾಹಿತ ಬಾಲಕನ ತಾಯಿ ಹೇಳುತ್ತಿದ್ದಾರೆ.
ಮದುವೆಯಾದ ನಂತರ ವಿದ್ಯಾರ್ಥಿ ಮತ್ತು ಶಿಕ್ಷಕಿ ಗಂಡ-ಹೆಂಡತಿಯಾಗಿ ಗುರುವಾರ ಪೊಲೀಸರೆದುರು ಶರಣಾಗಿದ್ದಾರೆ. ಬಾಲಕನಿಗೆ ಮನೋಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಗೆ ಟೀಚರ್ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ನಂತರ ಇದನ್ನು ತಾನು ಆಕೆಯಲ್ಲಿ ತೋಡಿಕೊಂಡಾಗ ಒಪ್ಪಿಕೊಂಡಿದ್ದಳು. ಬಳಿಕ ನಾವು ಓಡಿ ಹೋಗಿ ಮದುವೆಯಾಗಿದ್ದೇವೆ ಎಂದು ವಿದ್ಯಾರ್ಥಿ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.
ಈ ಸಂಬಂಧ ದೂರನ್ನು ಸ್ವೀಕರಿಸಿದ್ದೇವೆ. ಆದರೆ ಪ್ರಕರಣ ದಾಖಲಿಸಲಾಗಿಲ್ಲ. ವಿದ್ಯಾರ್ಥಿಗೆ ಈಗ ಅರಿವು ಮೂಡಿಸುವ ಯತ್ನ ಮಾಡಲಾಗುತ್ತಿದೆ. ಅವರಿಬ್ಬರು ಮದುವೆಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆತನ ಹೆತ್ತವರು ಮತ್ತು ಶಿಕ್ಷಕಿಯ ಜತೆ ನಾವು ಮಾತುಕತೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.