ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ದುಷ್ಕೃತ್ಯಕ್ಕೆ ಸ್ಫೋಟಕ ಪೂರೈಕೆಯಾದದ್ದು ಭಟ್ಕಳದಿಂದ
(Pune blast | Indian Mujahideen | Riyaz Ahmed Bhatkal | Iqbal Bhatkal)
ಕಳೆದ ಶನಿವಾರದ ಪುಣೆಯಲ್ಲಿ ನಡೆದ ಜರ್ಮನ್ ಬೇಕರಿ ದುಷ್ಕೃತ್ಯಕ್ಕೆ ಆರ್‌ಡಿಎಕ್ಸ್, ಅಮೋನಿಯಂ ನೈಟ್ರೇಟ್ ಮುಂತಾದ ಕಚ್ಚಾ ಸ್ಪೋಟಕ ವಸ್ತುಗಳನ್ನು ಭಟ್ಕಳದಿಂದ ರಿಯಾಜ್ ಭಟ್ಕಳ್ ಸಹಚರನೊಬ್ಬ ತಂದಿದ್ದ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ಈ ಮಾಹಿತಿಗಳನ್ನು ಕಲೆ ಹಾಕಿದ್ದು, ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಾದ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಸಹಚರನೊಬ್ಬ ಬಸ್ಸಿನಲ್ಲಿ ಭಟ್ಕಳಕ್ಕೆ ಹೋಗಿ ಅಲ್ಲಿಂದ ಸ್ಫೋಟಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ತಂದಿದ್ದ.
ಭಟ್ಕಳ ತಲುಪಿದಾಗ ಪುಣೆಗೆ ಕರೆ ಮಾಡುವಂತೆ ಆತನಿಗೆ ಒಂದು ಮೊಬೈಲ್ ಸಂಖ್ಯೆಯನ್ನೂ ನೀಡಲಾಗಿತ್ತು. ಭಟ್ಕಳಕ್ಕೆ ತಲುಪಿದ ನಂತರ ಉಗ್ರ ಪುಣೆಗೆ ಕರೆ ಮಾಡಿದ್ದ. ಈ ಸಂದರ್ಭದಲ್ಲಿ ಪುಣೆಯಿಂದ ಕಚ್ಚಾ ವಸ್ತುಗಳನ್ನು ಅನಾಮಿಕ ಉಗ್ರನಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಲಾಗಿತ್ತು. ನಂತರ ಭಟ್ಕಳದಿಂದ ಆತನನ್ನು ಸುರಕ್ಷಿತವಾಗಿ ಪುಣೆಗೆ ಕಳುಹಿಸಲಾಗಿತ್ತು.
PR
ಇದೇ ರೀತಿ ಸ್ಫೋಟಕ್ಕೆ ಅಗತ್ಯವಿರುವ ಸರ್ಕ್ಯೂಟ್ ಮತ್ತಿತರ ವಸ್ತುಗಳನ್ನು ಬೇರೆಡೆಯಿಂದ ಮತ್ತೊಬ್ಬ ಉಗ್ರ ತಂದಿದ್ದ. ಅವುಗಳನ್ನು ಪುಣೆಯಲ್ಲಿ ಕ್ರೋಢೀಕರಿಸಿದ ನಂತರ ಬಾಂಬ್ ಸಿದ್ಧಪಡಿಸಲಾಗಿತ್ತು.
ಬಾಂಬ್ ತಯಾರಿಕೆಗೆ ಇಂಡಿಯನ್ ಮುಜಾಹಿದೀನ್ ಇದೇ ತಂತ್ರಗಳನ್ನು ಈ ಹಿಂದೆ ಕೂಡ ದೇಶದಲ್ಲಿನ ದುಷ್ಕೃತ್ಯಗಳ ಸಂದರ್ಭಗಳಲ್ಲಿ ಅನುಸರಿಸಿತ್ತು. ಈ ಹಿಂದೆಯೂ ಭಟ್ಕಳದಿಂದ ಇಂಡಿಯನ್ ಮುಜಾಹಿದೀನ್ ಉಗ್ರರಿಗೆ ಕಚ್ಚಾ ಸ್ಫೋಟಕಗಳನ್ನು ಒದಗಿಸಲಾಗಿತ್ತು. ಬೆಳವಣಿಗೆಗಳ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುನೈದ್ ನೇರ ಸಂಪರ್ಕ ಹೊಂದಿದ್ದ... ಈ ನಡುವೆ ಬಾಟ್ಲಾ ಎನ್‌ಕೌಂಟರ್ ಆರೋಪಿ ಇಂಡಿಯನ್ ಮುಜಾಹಿದೀನ್‌ನ ಜುನೈದ್ ಭಟ್ಕಳ ಸಹೋದರರ ಜತೆ ನೇರ ಸಂಪರ್ಕ ಹೊಂದಿದ್ದ ಎಂದು ಇದೇ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿದ್ದ ಶಾಹ್ಜಾದ್ ಆಲಿಯಾಸ್ ಪಪ್ಪು ಪೊಲೀಸರಿಗೆ ತಿಳಿಸಿದ್ದಾನೆ.
ಜುನೈದ್ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಾದ ಭಟ್ಕಳ ಸಹೋದರರ ಜತೆ ಇಮೇಲ್ ಸಂಪರ್ಕ ಹೊಂದಿದ್ದ ಎಂದು ಬಂಧಿತ ಹೇಳುತ್ತಿದ್ದಾನೆ. ಜುನೈದ್‌ನನ್ನು ಬಂಧಿಸಲು ಸಾಧ್ಯವಾದರೆ ಭಟ್ಕಳ ಸಹೋದರರ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅವರಿಬ್ಬರೂ ನಮಗೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದಾರೆ ಎಂದು ಮೂಲವೊಂದು ಹೇಳಿದೆ.
ಮತ್ತೊಬ್ಬ ಅಧಿಕಾರಿಯ ಪ್ರಕಾರ ಭಟ್ಕಳ ಸಹೋದರರು ಈ ಪ್ರಕರಣದಲ್ಲಿ ನೇರ ಪಾಲ್ಗೊಂಡಿಲ್ಲ. ಪೊಲೀಸರ ಕೈಗೆ ಸಿಕ್ಕಿ ಬೀಳುವ ಭಯವಿರುವುದರಿಂದ ಇತರರನ್ನು ಮಾತ್ರ ಬಳಸಿಕೊಂಡು ನಿರ್ದೇಶನ ಮತ್ತು ಸಹಕಾರ ನೀಡಿದ್ದರು. ಇದನ್ನು ಕೂಡ ಶಾಹ್ಜಾದ್ ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.