ಗಡಿಯಾಚೆಗೆ ಕನಿಷ್ಠ 42 ಭಯೋತ್ಪಾದನಾ ತರಬೇತಿ ಶಿಬಿರಗಳಿವೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದರೆ, ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಗಡಿಯೊಳಗೆ ಉಗ್ರರ ನುಸುಳುವಿಕೆ ಮುಂದುವರಿದಿದೆ ಎಂದು ಮಿಲಿಟರಿ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಹೇಳಿದ್ದಾರೆ.
ಪಣಜಿಯಲ್ಲಿ ಮಿಗ್ 29 ಯುದ್ಧ ವಿಮಾನವನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆಂಟನಿ, ಗಡಿಯಾಚೆಗೆ 42 ಭಯೋತ್ಪಾದನಾ ಶಿಬಿರಗಳಿರುವುದು ಎಲ್ಲರಿಗೂ ಗೊತ್ತು. ಒಳ ನುಸುಳುವಿಕೆ ಯತ್ನಗಳು ಕೂಡ ದಿನೇದಿನೇ ಹೆಚ್ಚುತ್ತಿದೆ. ಭಯೋತ್ಪಾದಕರು ತೀವ್ರ ಕ್ರಿಯಾಶೀಲರಾಗಿದ್ದಾರೆ. ಇದೇ ನಮ್ಮ ಪ್ರಮುಖ ಕಳವಳ ಎಂದರು.
ಆದರೆ ಮುಂದಿನ ವಾರ ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆಯಲಿರುವ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ಫಲಿತಾಂಶವನ್ನು ಈಗಲೇ ಹೇಳುವುದು ಅಸಾಧ್ಯ ಎಂದಿದ್ದಾರೆ.
ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕೆಂಬುದು ನಮ್ಮ ನಿರ್ಧಾರ. ಅವರ ವಿದೇಶಾಂಗ ಕಾರ್ಯದರ್ಶಿ ಇಲ್ಲಿಗೆ ಬರುತ್ತಿದ್ದಾರೆ. ಮಾತುಕತೆ ನಡೆಸುವುದರಿಂದ ಯಾವುದೇ ತಪ್ಪು ಮಾಡಿದಂತಾಗುವುದಿಲ್ಲ. ಆದರೆ ಫಲಿತಾಂಶದ ಕುರಿತು ಈಗಲೇ ಏನೂ ಹೇಳಲಾಗದು. ನಾನೇನೂ ಜ್ಯೋತಿಷಿಯಲ್ಲ ಎಂದರು.
ಪಕ್ಕದ ದೇಶದಿಂದ ಉಗ್ರರ ನುಸುಳುವಿಕೆ ಮುಂದುವರಿದಿದೆ... ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆಗೆ ನಮ್ಮ ಪಕ್ಕದ ರಾಷ್ಟ್ರ ಸಹಕಾರ ಮುಂದುವರಿಸಿದೆ. ಆದರೆ ನಮ್ಮ ಭದ್ರತಾ ಪಡೆಗಳು ಅವರ ಎಲ್ಲಾ ಯತ್ನಗಳನ್ನು ವಿಫಲಗೊಳಿಸುತ್ತಿವೆ. ಹಾಗೂ ಭಯೋತ್ಪಾದಕರು ನಮ್ಮ ಕಣ್ತಪ್ಪಿಸಿ ಒಳ ನುಗ್ಗಿದರೆ ಅವರನ್ನು ನಮ್ಮ ಪಡೆಗಳು ಮಟ್ಟ ಹಾಕುತ್ತವೆ ಎಂದರು.
ಗಡಿ ಪ್ರದೇಶದಲ್ಲಿ ಭಾರೀ ಮಂಜು ಸುರಿಯುತ್ತಿರುವ ಹೊರತಾಗಿಯೂ ನುಸುಳುವಿಕೆ ಹೇಗೆ ಹೆಚ್ಚಳವಾಗುತ್ತಿದೆ ಎಂಬ ಪ್ರಶ್ನೆಗೆ ಅವರು, ಪಿರ್ ಪಂಜಾಲ್ ಪ್ರದೇಶದ ದಕ್ಷಿಣ ಭಾಗದಿಂದ ಭಯೋತ್ಪಾದಕರನ್ನು ಗಡಿಯತ್ತ ಹೋಗುವಂತೆ ಬಲವಂತ ಮಾಡಲಾಗುತ್ತಿದೆ ಎಂದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗಿರುವ ಭಾರತೀಯ ಉಗ್ರರನ್ನು ಮರಳಿ ಸ್ವೀಕರಿಸುವ ಕೇಂದ್ರ ಗೃಹ ಸಚಿವಾಲಯದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಕಾರವು ಅಗತ್ಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಭರವಸೆ ತನಗಿದೆ ಎಂದರು.