ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏಸು ಕೈಯಲ್ಲಿ ಸಿಗರೇಟು, ಬಿಯರ್; ಶಾಲಾ ಪುಸ್ತಕ ಜಪ್ತಿ (Cigarette-holding Jesus | school book | Shillong | Jesus Christ)
ಏಸು ಕ್ರಿಸ್ತನ ಒಂದು ಕೈಯಲ್ಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಬಿಯರ್ ಕ್ಯಾನ್ ಕೊಟ್ಟ ಚಿತ್ರವನ್ನು ಮೇಘಾಲಯದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಲಾಗುವ ಪುಸ್ತಕದಲ್ಲಿ ಮುದ್ರಿಸಲಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಇದು ಬಯಲಿಗೆ ಬರುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಮೇಘಾಲಯ ಸರಕಾರ, ಎಲ್ಲಾ ಶಾಲೆಗಳು ಮತ್ತು ಪುಸ್ತಕದ ಅಂಗಡಿಗಳಿಂದ ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ ದೆಹಲಿಯ ಪುಸ್ತಕ ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದೆ.
ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನ ಖಾಸಗಿ ಶಾಲೆಯಲ್ಲಿ ಈ ಆಕ್ಷೇಪಾರ್ಹ ಚಿತ್ರವನ್ನೊಳಗೊಂಡ ಕಾಪಿ ಪುಸ್ತಕ (ಇಂಗ್ಲೀಷ್ ಅಕ್ಷರ ಮಾಲೆಯನ್ನು ಹೊಂದಿರುವ, ಕಾಪಿ ಬರೆಯಬಹುದಾದ ಪುಸ್ತಕ) ಮೊದಲು ಪತ್ತೆಯಾಗಿತ್ತು. ಪೋಷಕರು ಇದನ್ನು ಗಮನಿಸಿ ದೂರು ನೀಡಿದ್ದರು. ತಕ್ಷಣವೇ ಸರಕಾರ ಕಾರ್ಯಪ್ರವೃತ್ತಗೊಂಡಿದ್ದು ಎಲ್ಲಾ ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಈ ರೀತಿಯಾಗಿ ಜೀಸಸ್ ಕ್ರಿಸ್ತನನ್ನು ಅತಿ ಕೆಟ್ಟದಾಗಿ ಚಿತ್ರಿಸಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವು ಮತ್ತು ಆಘಾತವನ್ನುಂಟು ಮಾಡಿದೆ. ಪ್ರಕಾಶಕರು ತೋರಿರುವ ಧರ್ಮಗಳ ಕಡೆಗಿನ ಗೌರವದ ಕೊರತೆಯನ್ನು ನಾವು ಖಂಡಿಸುತ್ತೇವೆ ಎಂದು ಶಿಲ್ಲಾಂಗ್ ಆರ್ಚ್‌ಬಿಷಪ್ ಡೊಮಿನಿಕ್ ಜಾಲಾ ಪ್ರತಿಕ್ರಿಯೆ ನೀಡಿದ್ದಾರೆ.
ಒಂದನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನವದೆಹಲಿಯ 'ಸ್ಕೈಲೈನ್' ಎಂಬ ಪ್ರಕಾಶಕರು ಈ ಪುಸ್ತಕಗಳನ್ನು ಮುದ್ರಿಸಿದ್ದರು. ಐದನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಇಂತಹುದೇ ಪುಸ್ತಕಗಳನ್ನು ನೀಡಲಾಗಿತ್ತು. ಅವುಗಳನ್ನು ಈಗ ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಶಾಲೆ ಮೂಲಗಳು ಹೇಳಿವೆ.
ಒಂದು ಧರ್ಮಕ್ಕೆ ಈ ರೀತಿ ಸಂಪೂರ್ಣ ಅಗೌರವ ತೋರಿಸುವ ಚಿತ್ರವನ್ನು ಪ್ರಕಾಶಕನೊಬ್ಬ ಹೇಗೆ ಪ್ರಕಟಿಸುತ್ತಾನೆ. ಬೆಳೆಯುತ್ತಿರುವ ಮಕ್ಕಳಲ್ಲಿ ಇದು ಎಂತಹ ಪರಿಣಾಮಗಳನ್ನು ಬೀರಬಹುದು ಎಂದು ಒಂದು ಕ್ಷಣ ಯೋಚಿಸಿ ಎಂದು ಡೊಮಿನಿಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳ ಪುಸ್ತಕಗಳು ಮೇಘಾಲಯ ಶಿಕ್ಷಣ ಮಂಡಳಿಯ ಕಟ್ಟಳೆಯೊಳಗೆ ಬರುತ್ತಿಲ್ಲವಾದರೂ ನಾವು ಎಲ್ಲಾ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಾವು ಯೋಚಿಸುತ್ತಿದ್ದೇವೆ ಎಂದು ಮೇಘಾಲಯ ಶಿಕ್ಷಣ ಮಂತ್ರಿ ಅಂಪರೀನ್ ಲಿಂಗ್ಡೋ ತಿಳಿಸಿದ್ದಾರೆ.
ಭಾರತೀಯ ಕ್ಯಾಥೊಲಿಕ್ ಚರ್ಚ್ ಈಗಾಗಲೇ ಸ್ಕೈಲೈನ್ ಪ್ರಕಾಶಕರು ಪ್ರಕಟಿಸುವ ಎಲ್ಲಾ ಪುಸ್ತಕಗಳ ಮೇಲೆ ನಿಷೇಧ ಹೇರಿದ್ದಾರೆ.